​ಆ. 24: ‘ಪಮ್ಮಣ್ಣೆ ದಿ ಗ್ರೇಟ್’ ಬಿಡುಗಡೆ

Update: 2018-08-20 12:29 GMT

ಮಂಗಳೂರು, ಆ.20: ಕುಡ್ಲ ಸಿನೇಮಾಸ್‌ನಲ್ಲಿ ಶ್ರೀ ಮುತ್ತುರಾಮ್ ಕ್ರಿಯೇಷನ್ ನಿರ್ಮಾಣದ ‘ಪಮ್ಮಣ್ಣೆ ದಿ ಗ್ರೇಟ್’ ತುಳು ಸಿನೆಮಾ ಆ. 24ರಂದು ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲೆಯ 15 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರಕ್ಕೆ ಕಥೆ-ಚಿತ್ರಕಥೆ- ಸಂಭಾಷಣೆ ನೀಡಿ ನಿರ್ದೇಶಿಸಿರುವ ಇಸ್ಮಾಯಿಲ್ ಮೂಡುಶೆಡ್ಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 9:15ಕ್ಕೆ ಕಾರ್ಕಳದ ರಾಧಿಕಾ ಚಿತ್ರಮಂದಿರದಲ್ಲಿ ಈ ಸಿನೆಮಾದ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ಚಿತ್ರದಲ್ಲಿ ಹಾಸ್ಯದೊಂದಿಗೆ ತುಳುನಾಡಿನ ಜೀವನದಿ ನೇತ್ರಾವತಿಯ ಸಮಸ್ಯೆಯನ್ನು ಬಿಂಬಿಸಲಾಗಿದೆ. ಹಾಸ್ಯನಟ ಅರವಿಂದ್ ಬೋಳಾರ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕಥಾನಾಯಕನ ಪಾತ್ರದಲ್ಲಿ ಹಾಸ್ಯ ಹಾಗೂ ಮನೋಜ್ಞ ಅಭಿನಯದಲ್ಲಿ ಪಮ್ಮಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಮೊಗವೀರ ಕುಟುಂಬದ ಪಮ್ಮಣ್ಣೆ ಹಾಗೂ ಆತನ ಮೂವರು ತಂಗಿಯರಾದ ನೇತ್ರಾವತಿ, ಶಾಂಭವಿ, ನಂದಿನಿ (ಕಿವುಡಿ, ಮೂಗಿ, ಕುರುಡಿ) ಈ ಚಿತ್ರದ ಮುಖ್ಯಪಾತ್ರವಾಗಿದೆ ಎಂದು ಇಸ್ಮಾಯೀಲ್ ಹೇಳಿದರು.

ಎಂ.ಕೆ. ಸೀತಾರಾಮ ಕುಲಾಲ್ ರಚಿಸಿರುವ ತುಳು ಎವರ್‌ಗ್ರೀನ್ ಹಾಡು ‘ಮೋಕೆದ ಸಿಂಗಾರಿ’ಯನ್ನು ಈಗಿನ ಟ್ರೆಂಡ್‌ಗೆ ತಕ್ಕಂತೆ ಬದಲಾಯಿಸಿ ಬಳಸಿರುವುದು ಚಿತ್ರದ ವಿಶೇಷತೆಯಾಗಿದೆ. ಅದಲ್ಲದೆ ಕಾವೀ ಕೃಷ್ಣದಾಸ್ ರಚಿಸಿರುವ ‘ಮೀನ್ ಬೋಡೆ ಮೀನ್’ ಹಾಗೂ ಸುರೇಶ್ ಆರ್.ಎಸ್. ರಚನೆಯ ‘ಪಮ್ಮಣ್ಣೆ ಪಮ್ಮಣ್ಣೆ ’ ಹಾಡು ಗಮನ ಸೆಳೆಯಲಿದೆ. ವಿಭಿನ್ನ ಕಥೆಯೊಂದನ್ನು ಹಾಸ್ಯದ ಮೂಲಕ ಹೇಳಹೊರಟಿರುವ ಇದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದೆ.

ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ ಪಡೆದಿದೆ. ಕೃಷ್ಣ ನಾಯಕ್ ಕಾರ್ಕಳ ಹಾಗೂ ವೀರೇಂದ್ರ ಸುವರ್ಣ ಕಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಎಸ್.ಪಿ. ಚಂದ್ರಕಾಂತ್ ಸಂಗೀತ ನೀಡಿದ್ದಾರೆ. ಒಂದು ತಿಂಗಳ ಕಾಲ ಚಿತ್ರೀಕರಣಗೊಂಡ ಈ ಚಿತ್ರಕ್ಕೆ 60 ಲಕ್ಷ ರೂ. ವೆಚ್ಚವಾಗಿದೆ ಎಂದರು.

ಅರವಿಂದ ಬೋಳಾರ್, ಪೃಥ್ವಿ ಅಂಬರ್, ಶಿಲ್ಪಾ ಸುವರ್ಣ, ರಮೇಶ್ ಪಂಡಿತ್, ದನ್ವಿತ್ ಸುವರ್ಣ ಕಟೀಲ್, ಸತೀಶ್ ಬಂದಲೆ, ಪ್ರಾಣ್ ಶೆಟ್ಟಿ, ದೀಪಕ್ ರೈ, ಪ್ರಕಾಶ್ ತೂಮಿನಾಡು ತಾರಾಗಣದಲ್ಲಿದ್ದಾರೆ. ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್. ಗಣೇಶ್ ರಾವ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ನಟ ಅರವಿಂದ ಬೋಳಾರ್, ಪೃಥ್ವಿ ಅಂಬರ್, ಶಿಲ್ಪಾ ಸುವರ್ಣ,ವೀರೇಂದ್ರ ಸುವರ್ಣ ಕಟೀಲ್, ದನ್ವಿತ್ ಸುವರ್ಣ ಕಟೀಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News