ದ.ಕ ಜಿಲ್ಲೆಯಲ್ಲಿ 1000 ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿ : ಸಚಿವ ಕೃಷ್ಣ ಭೈರೇಗೌಡ

Update: 2018-08-21 13:20 GMT

ಮಂಗಳೂರು, ಆ.21:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷಾಂತ್ಯದಲ್ಲಿ 1000 ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿ ಇದೆ. ಈ ಪೈಕಿ ಈಗಾಗಲೇ 458 ಕಿಂಡಿ ಆಣೆಕಟ್ಟು ನಿರ್ಮಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಸಂಸದೀಯ ವ್ಯವಹಾರ ಖಾತೆ ಸಚಿವ ಕೃಷ್ಣ ಭೈರೇ ಗೌಡ ತಿಳಿಸಿದ್ದಾರೆ.

ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಳ್ತ ಮಜಲು ಕಿಂಡಿ ಆಣೆ ಕಟ್ಟಿನ ಕಾಮಗಾರಿಯನ್ನು ವೀಕ್ಷಿಸಿದ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಸೂಚನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಿಂಡಿ ಆಣೆ ಕಟ್ಟು ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು. ಸಚಿವರು ಇಂದು ಮಾಣಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ನೆಟ್ಲ ಮುಡ್ನೂರು ಗ್ರಾಮದ ಕಿಂಡಿ ಅಣೆಕಟ್ಟು, ಗೋಳ್ತಮಜಲು ಗ್ರಾಮದ ಘನ ತ್ಯಾಜ್ಯ ನಿರ್ವಹಣಾ ಘಟಕ, ಗೋಳ್ತಮಜಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ವೀಕ್ಷಿಸಿದ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿ ಸಮರ್ಪಕ ತಾಜ್ಯ ನಿರ್ವಹಣೆಗೆ ಕೆಲವು ಸೂಚನೆ ನೀಡಿದರು.

ಗೋಳ್ತ ಮಜಲಿನ ಘನತ್ಯಾಜ್ಯ ವಿಲೇವಾರಿ ಘಟಕವನ್ನು ವೀಕ್ಷಿಸಿದ ಸಚಿವ ಕೃಷ್ಣ ಭೈರೇ ಗೌಡ, ಈ ರೀತಿಯ ಘಟಕವನ್ನು ಸಮರ್ಪಕವಾಗಿ ನಡೆಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಸಿದರೆ ಮಾರಾಟದ ಸಮಸ್ಯೆ ಉಂಟಾಗದು. ರಾಜ್ಯದಲ್ಲಿ ಸಾವಯವ ಗೊಬ್ಬರಕ್ಕೆ ಅಥವಾ ತಿಪ್ಪೇ ಗೊಬ್ಬರಕ್ಕೆ ಉತ್ತಮ ಬೇಡಿಕೆ ಇದೆ. ನಾವು ಬೆಂಗಳೂರಿನಲ್ಲಿ ಕಂಪೋಸ್ಟ್ ಗೊಬ್ಬರ ತಯಾರಿಸಿ 20ಸಾವಿರ ಟನ್ ಮಾರಾಟ ಮಾಡಿದ್ದೇವೆ .ರೈತರಿಂದ ಇನ್ನೂ ಹೆಚ್ಚಿನ ಬೇಡಿಕೆ ಬಂದಿದೆ, ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಸಚಿವ ಕೃಷ್ಣ ಭೈರೇ ಗೌಡ ತಿಳಿಸಿದ್ದಾರೆ.

ಘಟಕವನ್ನು ವೀಕ್ಷಿಸಿದ ಸಚಿವರು ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆ ನೀಡಿದರು. ಘನತ್ಯಾಜ್ಯ ಸಂಗ್ರಹದಲ್ಲಿ ಹಸಿಕಸ ಮತ್ತು ಘನತ್ಯಾಜ್ಯ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಒಟ್ಟಿಗೆ ಸಂಗ್ರಹಿಸುವುದರಿಂದ ಅದನ್ನು ಪ್ರತ್ಯೇಕಿಸುವುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸಚಿವರು ಸೂಚನೆ ನೀಡಿದರು.

ಹಸಿ ಕಸ ಸಂಗ್ರಹಿಸಿ ಗೋಬರ್ ಗ್ಯಾಸ್ ಘಟಕವನ್ನು ತೆರೆಯಲು ಜಿಲ್ಲೆಯಲ್ಲಿ ಪೋತ್ಸಾಹ ನೀಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿ ತಿಳಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಅದಕ್ಕಿಂತಲೂ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ರೈತರಿಗೆ ಮಾರಾಟ ಮಾಡುವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂದು ಸಚಿವ ಕೃಷ್ಣ ಭೈರೆ ಗೌಡ ತಿಳಿಸಿದ್ದಾರೆ. ಸ್ವಚ್ಛ ಭಾರತ ಯೋಜನೆಯಲ್ಲಿ ಸಾವಯವ ಗೊಬ್ಬರ ತಯಾರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸಚಿವ ಕೃಷ್ಣ ಭೈರೇ ಗೌಡ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್‌ಗಳಲ್ಲಿ ಹಣಪಾವತಿಗೆ ವ್ಯವಸ್ಥೆ : ಗ್ರಾಮ ಪಂಚಾಯತ್‌ಗಳಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆದು ಹಣ ಪಾವತಿ ಮಾಡಲು ಜನರಿಗೆ ಅನುಕೂಲ ಮಾಡಿಕೊಡಲು ಸೂಕ್ತ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದು ಕೃಷ್ಣ ಭೈರೇ ಗೌಡ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News