ವಿಜ್ಞಾನದ ಪರಿಣಾಮ ವ್ಯಕ್ತಿಯನ್ನಾಧರಿಸಿದೆ: ಡಾ.ಎ.ಎಸ್.ಕಿರಣ್‍ ಕುಮಾರ್

Update: 2018-08-21 14:17 GMT

ಮೂಡುಬಿದಿರೆ, ಅ.21: "ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಾಮಾಜಿಕ ಪ್ರಗತಿಗಾಗಿ ಅತೀ ಹೆಚ್ಚು ವಿನಿಯೋಗಿಸಿದ ದೇಶವೆಂದರೆ ಅದು ಭಾರತ. ಇದರ ಶ್ರೇಯ ಇಸ್ರೋದ ಸ್ಥಾಪಕ ವಿಕ್ರಮ್ ಸಾರಾಬಾಯ್‍ಗೆ ಸಲ್ಲುತ್ತದೆ" ಎಂದು ಇಸ್ರೋದ ಸ್ಪೇಸ್‍ಕಮೀಷನ್‍ನ ಅಧ್ಯಕ್ಷ ಪದ್ಮಶ್ರೀ ಡಾ. ಎ. ಎಸ್. ಕಿರಣ್‍ಕುಮಾರ್ ಸಂತಸ ವ್ಯಕ್ತಪಡಿಸಿದರು. ಆಳ್ವಾಸ್ ಕಾಲೇಜಿನ ಎಐಇಟಿ ಸಭಾಂಗಣದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ವೇದಿಕೆ ರೋಸ್ಟ್ರಮ್‍ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಅಭಿವೃದ್ಧಿಯ ಹೆಸರಿನಲ್ಲಿ ಅನುಸರಿಸುವ ದೂರಗಾಮಿ ಅಲ್ಲದ ಕ್ರಮಗಳಿಂದ ನೈಸರ್ಗಿಕ ಪ್ರಕ್ರಿಯೆ ಬಲಹೀನವಾಗುತ್ತದೆ. ಇದು ದೇಶದ ಸುಸ್ಥಿರ ಬೆಳವಣಿಗೆಯ ದೃಷ್ಟಿಯಲ್ಲಿ ಅಹಿತಕರ. ಹಾಗಾಗಿ ಇಸ್ರೋ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅನುಷ್ಟಾನಗೊಳಿಸಿದೆ. ಈವರೆಗೆ 29ಕ್ಕೂ ಹೆಚ್ಚು ದೇಶಗಳು ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಆದರೆ ಭಾರತದಿಂದ ಉಡಾವಣೆಯಾಗಿರುವ ಎಲ್ಲಾ ಉಪಗ್ರಹಗಳು ದೂರಸಂಪರ್ಕ, ಪ್ರಸಾರ, ಹವಾಮಾನ ಹೀಗೆ ಅಭಿವೃದ್ಧಿಕೇಂದ್ರಿತವಾಗಿವೆ. ಮೀನುಗಾರರಿಗೆ ಹಾಗೂ ಕೃಷಿಕರಿಗೆ ಅಗತ್ಯ ಮಾಹಿತಿಗಳನ್ನು ಸೂಕ್ತ ಸಮಯದಲ್ಲಿ ಒದಗಿಸಲಾಗುತ್ತಿದೆ. ಅಲ್ಲದೇ ಇತ್ತೀಚೆಗೆ ಇಸ್ರೋ ಹೊರತಂದ 'ನಾವಿಕ್' ಕೂಡ ಸಂಚಾರ ವ್ಯವಸ್ಥೆಗೆ ಮತ್ತೊಂದು ಹೊಸ ಆಯಾಮ ನೀಡಿದೆ ಎಂದು ಮಾಹಿತಿ ನೀಡಿದರು.

ವಿಜ್ಞಾನಕ್ಷೇತ್ರದಲ್ಲಿ ಏನೇ ಪ್ರಗತಿ ಸಾಧಿಸಿದ್ದರೂ, ಅದು ಸದಾ ಹೊಸ ಆವಿಷ್ಕಾರಗಳಿಗೆ ತೆರೆದುಕೊಂಡಿರುತ್ತದೆ. ಬಾಹ್ಯಾಕಾಶಕ್ಕೆ ಯಾವುದೇ ಮಿತಿಗಳಿಲ್ಲದಿರುವುದೇ ಇದಕ್ಕೆ ಕಾರಣ. ಹಾಗಾಗಿ ನಮ್ಮ ಯೋಚನೆಗಳ ಗ್ರಹಿಕೆ ಮತ್ತು ಅದನ್ನು ಪ್ರಾಯೋಗಿಕವಾಗಿ ಉಪಯೋಗಿಸುವ ಬಗೆ ನಮಗೆ ತಿಳಿದಿರಬೇಕು. ನಮ್ಮಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಸಾಮಥ್ರ್ಯವನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮ ಮತ್ತು ಇತರರ ತಪ್ಪುಗಳಿಂದ ನಾವು ಕಲಿಯುತ್ತಾ ಹೋಗಬೇಕು. ಈ ದೇಶವನ್ನು ನಂಬರ್ ಒನ್ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಇಸ್ರೋ ಎಂದರೆ ಸದಾದೇಶದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವ ಸಂಸ್ಥೆ. ಡಾ. ಎ.ಎಸ್.ಕಿರಣ್‍ ಕುಮಾರ್ ರ ಅವಧಿಯಲ್ಲಿ ಇಸ್ರೋ ಒಂದು ಉನ್ನತ ಸ್ಥಾನವನ್ನು ತಲುಪಿದೆ. ಯುವಕರು ದೇಶದ ಅಭಿವೃದ್ಧಿಯ ಸಲುವಾಗಿ ಈ ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಲಹಾಬಾದ್ ಐಐಟಿಯ ನಿರ್ದೇಶಕ ಡಾ. ನಾಗಭೂಷಣ್, ರಾಮಕೃಷ್ಣ ಮಿಷನ್‍ನರಂಜಿತ್, ಆಳ್ವಾಸ್ ಸಂಸ್ಥೆಯಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತಿತ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಬಗೆಗಿನ ಪ್ರಶ್ನೆಗೆ ಉತ್ತರಿಸಿ ಬಾಹ್ಯಾಕಾಶ ವ್ಯವಸ್ಥೆಯಲ್ಲಿ ಪ್ರಸ್ತುತವಾಗಿ ಉಳಿದುಕೊಳ್ಳಲು, ವಿಜ್ಞಾನಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಅಗತ್ಯ. ಮನುಷ್ಯನಿರುವ ಉಪಗ್ರಹದ ಸಿದ್ಧತೆಗಳ ಕಾರ್ಯ ಈಗಾಗಲೇ ಆರಂಭಗೊಂಡಿದೆ. ನಮ್ಮನ್ನು ನಾವು ರಕ್ಷಣಾಕ್ಷೇತ್ರದಲ್ಲಿ ಸಮರ್ಥರಾಗಿರಲು ಇಂಥಹ ಉಪಗ್ರಹಗಳ ಉಡಾವಣೆಯಾಗಬೇಕು. ಇದು ಸಾಧಾರಣ ಉಪಗ್ರಹಗಳಿಗಿಂತ ಹೆಚ್ಚು ಮಾಹಿತಿಯನ್ನು ನೀಡುತ್ತದೆ. ವಿಜ್ಞಾನ ತಟಸ್ಥವಾದದ್ದು. ಅದರ ಬಳಕೆಯ ಪರಿಣಾಮ ವ್ಯಕ್ತಿಯನ್ನು ಆಧರಿಸಿರುತ್ತದೆ. ಅಣು ಶಕ್ತಿಯನ್ನೇ ನಿದರ್ಶನವಾಗಿ ಪರಿಗಣಿಸುವುದಾದರೆ ಅದನ್ನು ನಾಶ ಮಾಡುವ ಉದ್ದೇಶದಿಂದಲೂ ಉಪಯೋಗಿಸಬಹುದು ಇಲ್ಲವೇ ವಿದ್ಯುತ್ ಶಕ್ತಿಯಾಗಿಯೂ ಬಳಸಬಹುದು.
- ಡಾ. ಎ. ಎಸ್. ಕಿರಣ್‍ಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News