ಫೇಸ್‌ಬುಕ್‌ನಲ್ಲಿ ವಾಜಪೇಯಿಯನ್ನು ಟೀಕಿಸಿದ್ದ ವಿವಿ ಪ್ರಾಧ್ಯಾಪಕರ ವಿರುದ್ಧ ಎರಡು ಎಫ್‌ಐಆರ್

Update: 2018-08-21 14:20 GMT

ಮೋತಿಹಾರಿ(ಬಿಹಾರ),ಆ.21: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಟೀಕಿಸಿದ್ದ ಫೇಸ್‌ಬುಕ್ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದಕ್ಕಾಗಿ ಆ.17ರಂದು ಗುಂಪೊಂದು ಮಹಾತ್ಮಾ ಗಾಂಧಿ ಕೇಂದ್ರೀಯ ವಿವಿ (ಎಂಜಿಸಿಯು)ಯ ಸಹಾಯಕ ಪ್ರೊಫೆಸರ್ ಸಂಜಯ ಕುಮಾರ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಕುಮಾರ್ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

  ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಸಹ ಪ್ರಾಧ್ಯಾಪಕ ದಿನೇಶ ವ್ಯಾಸ್ ಒಂದು ಎಫ್‌ಐಆರ್‌ನ್ನು ದಾಖಲಿಸಿದ್ದಾರೆ. ವಿವಿಯ ಇನ್ನೋರ್ವ ಸಹೋದ್ಯೋಗಿ ಶಶಿಕಾಂತ್ ರಾಯ್ ಹೆಸರೂ ಎಫ್‌ಐಆರ್‌ನಲ್ಲಿದೆ. ವಾಜಪೇಯಿಯವರನ್ನು ಟೀಕಿಸಿ ಪೋಸ್ಟ್ ಮಾಡುವ ಮೂಲಕ ತನ್ನ ಮತ್ತು ಇತರರ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಕ್ಕಾಗಿ ಸ್ಥಳಿಯ ನಿವಾಸಿ ರಂಜಿತ್ ಯಾದವ ಇನ್ನೊಂದು ಎಫ್‌ಐಆರ್ ದಾಖಲಿಸಿದ್ದಾರೆ.

ಕುಮಾರ್ ಮತ್ತು ರಾಯ್ ತನಗೆ ಮಾನಸಿಕ ಕಿರುಕುಳ ನೀಡಲು ಅನುಚಿತ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ವ್ಯಾಸ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಆಝಾದ್ ನಗರ ಬಡಾವಣೆಯಲ್ಲಿನ ನಿವಾಸದಿಂದ ಕುಮಾರ್ ಅವರನ್ನು ಹೊರಗೆಳೆದಿದ್ದ ಗುಂಪು ಅವರ ಒಳಉಡುಪುಗಳನ್ನು ಬಿಟ್ಟು ವಿವಸ್ತ್ರಗೊಳಿಸಿ ಥಳಿಸಿತ್ತು.

ವಾಜಪೇಯಿಯವರ ರಾಜಕೀಯ ಸಿದ್ಧಾಂತವನ್ನು ಪ್ರಶ್ನಿಸಿದ್ದ ಫೇಸ್‌ಬುಕ್ ಪೋಸ್ಟ್‌ವೊಂದನ್ನು ಕುಮಾರ ಶೇರ್ ಮಾಡಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ 12 ಜನರ ವಿರುದ್ಧ ಕುಮಾರ್ ದೂರು ದಾಖಲಿಸಿದ್ದಾರೆ.

ಕುಮಾರ್ ಅವರ ಮೇಲೆ ಹಲ್ಲೆಯ ಬಳಿಕ ವಿವಿಯ ಕ್ಯಾಂಪಸ್‌ನಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದ್ದರಿಂದ ಆ.17ರಂದು ಅದನ್ನು ಅನಿದಿಷ್ಟಾವಧಿಗೆ ಮುಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News