ಡೋಕಾ ಲಾ ಬಿಕ್ಕಟ್ಟಿನ ಕುರಿತು ಕೇಂದ್ರ ಸರಕಾರ ಸಿಕ್ಕಿಂಗೆ ಮಾಹಿತಿ ನೀಡಿಲ್ಲ: ಮುಖ್ಯಮಂತ್ರಿ ಚಾಮ್ಲಿಂಗ್

Update: 2018-08-21 14:24 GMT

ಗ್ಯಾಂಗ್ಟಕ್,ಆ.21: ಚೀನಾದೊಂದಿಗೆ ಡೋಕಾ ಲಾ ಬಿಕ್ಕಟ್ಟಿನ ಸಂದರ್ಭ ಕೇಂದ್ರವು ರಾಜ್ಯ ಸರಕಾರಕ್ಕೆ ಯಾವುದೇ ಮಾಹಿತಿ ನೀಡದೆ ಕತ್ತಲಲ್ಲಿರಿಸಿತ್ತು ಎಂದು ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಹೇಳಿದ್ದಾರೆ.

ಕೇಂದ್ರ ಸರಕಾರವಾಗಲೀ ಸೇನೆಯಾಗಲೀ ಪರಿಸ್ಥಿತಿಯ ಕುರಿತು ತನಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸೋಮವಾರ ಇಲ್ಲಿ ಪಶ್ಚಿಮ ಬಂಗಾಳದ ಪತ್ರಕರ್ತರ ತಂಡವೊಂದರ ಜೊತೆ ಮಾತನಾಡುತ್ತಿದ್ದ ಅವರು ತಿಳಿಸಿದರು.

ಅಂತಹ ಉದ್ವಿಗ್ನ ಸ್ಥಿತಿಯ ಸಂದರ್ಭದಲ್ಲಿಯೂ ಟಿವಿ ಮತ್ತು ವೃತ್ತಪತ್ರಿಕೆಗಳ ಮೂಲಕವೇ ತನಗೆ ಬಿಕ್ಕಟ್ಟಿನ ಬಗ್ಗೆ ಗೊತ್ತಾಗಿತ್ತು ಎಂದ ಚಾಮ್ಲಿಂಗ್,ಡೋಕಾ ಲಾ ವಿವಾದದ ಕುರಿತು ಸಿಕ್ಕಿಂ ಜನತೆಯಲ್ಲಿ ಭೀತಿಯ ಮಾನಸಿಕತೆ ಇದೆ ಎಂದರು.

ದೇಶದ ಪಾವಿತ್ರ ಮತ್ತು ಭದ್ರತೆಯನ್ನು ಎತ್ತಿಹಿಡಿಯಲು ತನ್ನ ಸಾಮರ್ಥ್ಯದಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡುವುದು ಸಿಕ್ಕಿಂ ಸರಕಾರದ ಧೋರಣೆಯಾಗಿದೆ ಎಂದು ದೇಶದ ಅತ್ಯಂತ ಸುದೀರ್ಘಾವಧಿಯ ಮುಖ್ಯಮತ್ರಿಯಾಗಿರುವ ಚಾಮ್ಲಿಂಗ್ ತಿಳಿಸಿದರು.

 ಪ್ರತ್ಯೇಕ ರಾಜ್ಯವಾಗಿ ದಾರ್ಜಿಲಿಂಗ್ ಬೇಡಿಕೆಯ ಹಿನ್ನೆಲೆಯಲ್ಲಿ ಸಿಕ್ಕಿಂ-ಪ.ಬಂಗಾಳ ಸಂಬಂಧಗಳ ಕುರಿತ ಪ್ರಶ್ನೆಗೆ ಅವರು,ತಾನು ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಮಾತನಾಡಿದ್ದು,ಆ ಪ್ರದೇಶದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಜೊತೆಯಾಗಿ ಶ್ರಮಿಸುವ ಭರವಸೆ ನೀಡಿದ್ದೇನೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News