9ರ ಹರೆಯದ ಪುತ್ರನಿಗೆ ದಯಾಮರಣ ಕೋರಿದ ವ್ಯಕ್ತಿ

Update: 2018-08-21 14:25 GMT

ಚೆನ್ನೈ, ಆ.21: ಹುಟ್ಟಿದಾಗಿನಿಂದ ನಿಷ್ಕ್ರಿಯನಾಗಿರುವ ತನ್ನ 9ರ ಹರೆಯದ ಪುತ್ರನಿಗೆ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಕೋರಿ ವ್ಯಕ್ತಿಯೊಬ್ಬ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಟೈಲರ್ ವೃತ್ತಿಯಲ್ಲಿರುವ ಆರ್.ತಿರುಮೇನಿ ಎಂಬವರು ಅರ್ಜಿ ಸಲ್ಲಿಸಿದ್ದು, 2008ರಲ್ಲಿ ಜನಿಸಿದ ತನ್ನ ಪುತ್ರ ಹುಟ್ಟಿದಾಗಿನಿಂದಲೂ ನಿಷ್ಕ್ರಿಯ ಸ್ಥಿತಿಯಲ್ಲಿದ್ದಾನೆ. ಅಲ್ಲದೆ ದಿನಾ 10ರಿಂದ 20 ಬಾರಿ ಅಪಸ್ಮಾರ ಕಾಯಿಲೆ(ಮೂರ್ಚೆ ರೋಗ)ಗೆ ಒಳಗಾಗುತ್ತಿದ್ದು ಔಷಧಿ ನೀಡಿ ಮೂರ್ಚೆ ರೋಗವನ್ನು ನಿಯಂತ್ರಿಸಬೇಕು . ತನ್ನ ಪುತ್ರನ ಚಿಕಿತ್ಸೆಗಾಗಿ ತಿಂಗಳಿಗೆ 10,000 ರೂ. ಖರ್ಚಾಗುತ್ತಿದೆ. ಆತನನ್ನು ಪರೀಕ್ಷಿಸಿದ ಎಲ್ಲಾ ವೈದ್ಯರೂ, ಮಗು ಈಗಿರುವ ಸ್ಥಿತಿಯಿಂದ ಚೇತರಿಸಿಕೊಳ್ಳುವ ನಿರೀಕ್ಷೆ ಇಲ್ಲ ಎಂದು ದೃಢಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಈಗ ಮಗುವಿಗೆ ನೀಡುತ್ತಿರುವ ಔಷಧಿ, ಆಹಾರ , ಪೋಷಕವಸ್ತುಗಳನ್ನು ನಿಲ್ಲಿಸಲು ಅನುಮತಿ ನೀಡಿ, ಮಗು ಕೊನೆಯುಸಿರೆಳೆಯಲು ದಾರಿ ಸುಗಮಗೊಳಿಸಬೇಕು ಎಂದು ತಿರುಮೇನಿ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದಾರೆ.

ಒಂದು ದಿನ 150 ಬಾರಿ ಮೂರ್ಚೆರೋಗಕ್ಕೆ ಒಳಗಾಗಿದ್ದ ಎಂದು ಅರ್ಜಿದಾರರ ಪರ ವಕೀಲೆ ಎನ್.ಕವಿತಾ ರಾಮೇಶ್ವರ್ ತಿಳಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠವು, ನ್ಯಾಯಾಲಯ ರಚಿಸಲಿರುವ ತಜ್ಞರ ಸಮಿತಿಗೆ ಸಲಹೆ, ಶಿಫಾರಸು ನೀಡುವ ನಿಟ್ಟಿನಲ್ಲಿ ವೈದ್ಯರ ತಂಡವೊಂದನ್ನು ಸೂಚಿಸುವಂತೆ ರಾಜ್ಯ ಸರಕಾರಕ್ಕೆ ತಿಳಿಸಿ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ. ಈ ಸಮಿತಿಯು ಮಗುವನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.ಆ.23ರಂದು ವೈದ್ಯರ ತಂಡವನ್ನು ಹೆಸರಿಸುವಂತೆ ರಾಜ್ಯ ಸರಕಾರಕ್ಕೆ ತಿಳಿಸಲಾಗಿದೆ. ಕಟ್ಟುಮನ್‌ರ್‌ಕೋಲಿ ಎಂಬಲ್ಲಿ 2008ರ ನವೆಂಬರ್ 6ರಂದು ಮಗು (ಪರ್ವೇಂಧನ್) ಜನಿಸಿದೆ. ಇತರ ಮಕ್ಕಳಂತೆ ಹುಟ್ಟಿದಾಕ್ಷಣ ಈ ಮಗು ಅಳಲಿಲ್ಲ. ಆಗ ಶಿಶುತಜ್ಞ ವೈದ್ಯರಲ್ಲಿ ಪರೀಕ್ಷಿಸಿದಾಗ ಮಗು ಎಚ್‌ಐಇ(ಹೈಪೋಕ್ಸಿಕ್ ಇಷೆಮಿಕ್ ಎನ್‌ಸೆಫಲೋಪಥಿ)ಯಿಂದ ನರಳುತ್ತಿರುವುದು ಖಚಿತವಾಗಿದೆ.

 ಎಚ್‌ಐಇ ಬಾಧಿತ ಮಕ್ಕಳು ಎಚ್ಚರದ ಸ್ಥಿತಿಯಲ್ಲಿದ್ದರೂ ತನ್ನ ಬಗ್ಗೆ ಅಥವಾ ಸುತ್ತಮುತ್ತಲಿನವರ ಬಗ್ಗೆ ಅರಿವನ್ನು ಹೊಂದಿರುವುದಿಲ್ಲ. ಈ ಮಗುವಿಗೆ ಹಾಸಿಗೆಯಲ್ಲಿ ಕುಳಿತುಕೊಳ್ಳಲೂ ಆಗುತ್ತಿರಲಿಲ್ಲ. ಎಚ್ಚರವಾಗಿದ್ದರೂ ನಿದ್ರಿಸುವ ಸ್ಥಿತಿಯಲ್ಲಿದ್ದ ಮಗುವಿಗೆ ಆಹಾರವನ್ನು ನುಣ್ಣಗೆ ರುಬ್ಬಿ ಬಲವಂತವಾಗಿ ಬಾಯಿಯ ಮೂಲಕ ಹೊಟ್ಟೆಯೊಳಗೆ ತಳ್ಳಬೇಕು. ಆತನ ಕರುಳು, ಮೂತ್ರಕೋಶ ಸಹಿತ ಯಾವುದೇ ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಕೀಲೆ ಕವಿತಾ ರಾಮೇಶ್ವರ್ ತಿಳಿಸಿದ್ದಾರೆ. ಈ ಮಗುವನ್ನು ನೋಡಿಕೊಳ್ಳಲು ಯಾವುದೇ ಆಶ್ರಮ ಅಥವಾ ಅನಾಥಾಶ್ರಮಗಳು ಮುಂದೆ ಬಂದಿಲ್ಲ. ತಿರುಮೇನಿಯ ಇತರ ಇಬ್ಬರು ಮಕ್ಕಳು ಸಮಾಜದಲ್ಲಿ ಮುಜುಗುರಕ್ಕೆ ಒಳಗಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಹಿಂದೆ ಇಂತಹಾ ಪ್ರಕರಣಗಳಲ್ಲಿ ದಯಾಮರಣಕ್ಕೆ ಅನುಮತಿ ನೀಡಿರುವಂತೆ ಈ ಪ್ರಕರಣದಲ್ಲೂ ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News