ಲೈಂಗಿಕ ಕಾರ್ಯಕರ್ತೆಯರಿಂದ ಕೇರಳದ ನೆರೆ ಸಂತ್ರಸ್ತರಿಗೆ 21,000 ರೂ. ಧನ ಸಹಾಯ

Update: 2018-08-21 14:29 GMT

ಅಹ್ಮದ್‌ನಗರ,ಆ.21: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯರು ಕೇರಳದ ನೆರೆಪೀಡಿತರಿಗಾಗಿ 21,000 ರೂ.ಗಳ ದೇಣಿಗೆಯನ್ನು ಸಲ್ಲಿಸಿದ್ದಾರೆ ಮತ್ತು ಈ ತಿಂಗಳ ಅಂತ್ಯದೊಳಗೆ ಇನ್ನೂ ಒಂದು ಲಕ್ಷ ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರ ನಿಯೋಗವೊಂದು ಸೋಮವಾರ ಇಲ್ಲಿ ಉಪ ಜಿಲ್ಲಾಧಿಕಾರಿ ಪ್ರಶಾಂತ ಪಾಟೀಲ ಅವರನ್ನು ಭೇಟಿಯಾಗಿ ಕೇರಳ ನೆರೆಪೀಡಿತರಿಗಾಗಿ ಪ್ರಧಾನಿಗಳ ಪರಿಹಾರ ನಿಧಿಯ ಹೆಸರಿನಲ್ಲಿ 21,000 ರೂ.ಗಳ ಚೆಕ್ ನೀಡಿದ್ದಾರೆ ಎಂದು ಅವರಿಗಾಗಿ ದುಡಿಯುತ್ತಿರುವ ಎನ್‌ಜಿಒ ಸ್ನೇಹಾಲಯದ ಪದಾಧಿಕಾರಿ ದೀಪಕ್ ಬುರಮ್ ಸುದ್ದಿಗಾರರಿಗೆ ತಿಳಿಸಿದರು. ಸ್ನೇಹಾಲಯ ಕಳೆದ 30 ವರ್ಷಗಳಿಂದಲೂ ಲೈಂಗಿಕ ಕಾರ್ಯಕರ್ತೆಯರ ಏಳಿಗೆಗಾಗಿ ಶ್ರಮಿಸುತ್ತಿದೆ.

  ಈ ಹಿಂದೆಯೂ ದೇಶದ ವಿವಿಧೆಡೆಗಳಲ್ಲಿ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಲೈಂಗಿಕ ಕಾರ್ಯಕರ್ತೆಯರು ದೇಣಿಗೆಗಳನ್ನು ಸಲ್ಲಿಸಿದ್ದಾರೆ. 2015,ಡಿಸೆಂಬರ್‌ನಲ್ಲಿ ಮಳೆಯಿಂದಾಗಿ ಸಂಕಷ್ಟದಲ್ಲಿದ್ದ ಚೆನ್ನೈನಲ್ಲಿ ಪರಿಹಾರ ಕಾರ್ಯಗಳಿಗಾಗಿ ಒಂದು ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದರು. ವಿವಿಧ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಮತ್ತು ಕಾರ್ಗಿಲ್ ಹಿರೋಗಳ ಕುಟುಂಬಗಳಿಗಾಗಿ ಲೈಂಗಿಕ ಕಾರ್ಯಕರ್ತೆಯರು ಈವರೆಗೆ ಒಟ್ಟು ಸುಮಾರು 27 ಲ.ರೂ.ಗಳ ದೇಣಿಗೆಗಳನ್ನು ಸಲ್ಲಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News