ವಾಜಪೇಯಿ ಸ್ಮಾರಕ ನಿರ್ಮಾಣ: ಪೈಪೋಟಿಗಿಳಿದ ಚತ್ತೀಸ್‌ಗಡ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ
ರಾಯ್ಪುರ್,ಆ.21: ಆಗಸ್ಟ್ 16ರಂದು ಹೊಸದಿಲ್ಲಿಯಲ್ಲಿ ನಿಧನ ಹೊಂದಿದ ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕವನ್ನು ನಿರ್ಮಿಸಲು ಚತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ಪೈಪೋಟಿಗಿಳಿದಿದೆ.
ಚತ್ತೀಸ್‌ಗಡದಲ್ಲಿರುವ ನಯಾ ರಾಯ್ಪುರ್ ನಗರಕ್ಕೆ ಅಟಲ್ ನಗರ ಎಂದು ಮರುನಾಮಕರಣ ಮಾರುವ ಪ್ರಸ್ತಾವಕ್ಕೆ ಮಂಗಳವಾರ ರಾಜ್ಯದ ಸಚಿವ ಸಂಪುಟ ಅನುಮತಿ ನೀಡಿದೆ. ಬಿಜೆಪಿಯ ಹಿರಿಯ ಮುಖಂಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸ್ಮರಣಾರ್ಥ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ರಮಣ ಸಿಂಗ್ ತಿಳಿಸಿದ್ದಾರೆ.
ಮಧ್ಯಪ್ರದೇಶ ಕೂಡಾ ಗ್ವಾಲಿಯರ್ ಮತ್ತು ಭೋಪಾಲ್‌ನಲ್ಲಿ ವಾಜಪೇಯಿ ಸ್ಮಾರಕಗಳನ್ನು ನಿರ್ಮಿಸಲು ಯೋಚಿಸಿದೆ. ಜೊತೆಗೆ ಅಗಲಿದ ನಾಯಕನ ನೆನಪನ್ನು ಚಿರಸ್ಥಾಯಿಗೊಳಿಸಲು ಮುಂದಿನ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ವಾಜಪೇಯಿ ಜೀವನಚರಿತ್ರೆಯನ್ನು ಸೇರಿಸಲು ನಿರ್ಧರಿಸಿದೆ. ಭೋಪಾಲ್‌ನಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಗ್ಲೋಬಲ್ ಸ್ಕಿಲ್ ಪಾರ್ಕ್‌ಗೆ ವಾಜಪೇಯಿ ಹೆಸರಿಡಲು ಶಿವರಾಜ್ ಸಿಂಗ್ ಚೌಹಾಣ್ ಸರಕಾರ ನಿರ್ಧರಿಸಿದೆ.
ವಾಜಪೇಯಿಗೆ ಗೌರವ ಸೂಚಿಸುವ ಸಲುವಾಗಿ ಶಿಮ್ಲಾದಲ್ಲಿರುವ ಐತಿಹಾಸಿಕ ಪರ್ವತ ಶ್ರೇಣಿಯಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಸೋಮವಾರ ಹಿಮಾಚಲ ಪ್ರದೇಶದ ಸಚಿವ ಸಂಪುಟ ಅನುಮೋದನೆ ನೀಡಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ರೊಹ್ಟಾಂಗ್ ಸುರಂಗಮಾರ್ಗಕ್ಕೆ ಮಾಜಿ ಪ್ರಧಾನಿಯ ಹೆಸರಿಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದೆ.