ಆಶ್ರಯ ಮನೆಗಳನ್ನು ನಡೆಸಲು ಆಯ್ಕೆಯಾಗಿದ್ದ 50 ಎನ್‌ಜಿಒಗಳನ್ನು ರದ್ದುಗೊಳಿಸಿದ ಬಿಹಾರ

Update: 2018-08-21 14:43 GMT

ಪಾಟ್ನ,ಆ.21: ಬಿಹಾರದಲ್ಲಿ ಆಶ್ರಯ ಮನೆಗಳನ್ನು ನಡೆಸಲು ಆಯ್ಕೆಯಾಗಿದ್ದ 50 ಸರಕಾರೇತರ ಸಂಸ್ಥೆಗಳನ್ನು ರಾಜ್ಯ ಸರಕಾರ ರದ್ದುಗೊಳಿಸಿದ್ದು ಈ ಆಶ್ರಯ ಮನೆಗಳನ್ನು ಸರಕಾರವೇ ನಡೆಸಲು ನಿರ್ಧರಿಸಿರುವುದಾಗಿ ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳ ಬದಲಾಗಿ ಸಾಮಾಜಿಕ ಕಲ್ಯಾಣ ಇಲಾಖೆ ಈ ಆಶ್ರಯ ಮನೆಗಳನ್ನು ನೋಡಿಕೊಳ್ಳುವುದು ಎಂದು ಅವರು ತಿಳಿಸಿದ್ದಾರೆ. ಮುಝಫ್ಫರ್‌ಪುರದಲ್ಲಿರುವ ಆಶ್ರಯ ಮನೆಯಲ್ಲಿ ನಡೆದ ಮೂವತ್ತು ಅತ್ಯಾಚಾರಗಳು ಮತ್ತು ಇಬ್ಬರು ಮಹಿಳೆಯರ ಹತ್ಯೆ ಪ್ರಕರಣಗಳನ್ನು ಗಮನದಲ್ಲಿರಿಸಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಟಾಟಾ ಸಮಾಜಶಾಸ್ತ್ರಗಳ ಸಂಸ್ಥೆ (ಟಿಐಎಸ್ಸೆಸ್) ನಡೆಸಿದ ಸಾಮಾಜಿಕ ಆಡಿಟ್ ವೇಳೆ ಬಿಹಾರದಲ್ಲಿ ಎನ್‌ಜಿಒಗಳು ನಡೆಸುತ್ತಿರುವ ಆಶ್ರಯ ಮನೆಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಬೆಳಕಿಗೆ ಬಂದಿದ್ದವು.

ಟಿಐಎಸ್ಸೆಸ್ ನಡೆಸಿದ ಸಮೀಕ್ಷೆ ವೇಳೆ ಮುಝಫ್ಫರ್‌ಪುರದಲ್ಲಿ ಬೃಜೇಶ್ ಠಾಕೂರ್ ಎಂಬಾತ ನಡೆಸುತ್ತಿರುವ ಹೆಣ್ಮಕ್ಕಳ ಆಶ್ರಯ ಮನೆಯಲ್ಲಿರುವ 41 ಬಾಲಕಿಯರ ಪೈಕಿ 34 ಬಾಲಕಿಯರನ್ನು ಅತ್ಯಾಚಾರ ಮಾಡಲಾಗಿದೆ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಕೂರ್ ಸೇರಿದಂತೆ ಇತರ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಸಂಬಂಧ ರಾಜ್ಯ ಸಾಮಾಜಿಕ ಕಲ್ಯಾಣ ಸಚಿವೆ ಮಂಜು ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News