ವಿಶ್ವಸಂಸ್ಥೆ ಬಾಗಿಲು ತಟ್ಟಿದ ತರೂರ್: ವಿವಾದ

Update: 2018-08-21 16:32 GMT

ಹೊಸದಿಲ್ಲಿ, ಆ. 21: ತಾನು ಕೇರಳ ಸರಕಾರದ ರಾಯಭಾರಿ ಹಾಗೂ ನೆರೆ ಸಂತ್ರಸ್ತ ಕೇರಳಕ್ಕೆ ವಿಶ್ವಸಂಸ್ಥೆಯಿಂದ ನೆರವು ಕೋರಲು ಜಿನೇವಾದಲ್ಲಿ ಇದ್ದೇನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಪಾದಿಸಿದ್ದಾರೆ. ಆದರೆ, ಈ ಪ್ರತಿಪಾದನೆಯನ್ನು ಕೇರಳ ಸರಕಾರ ನಿರಾಕರಿಸಿದೆ.

 ನೆರೆ ಪೀಡಿತ ತನ್ನ ತವರೂರಾದ ಕೇರಳಕ್ಕೆ ನೆರವು ಕೋರಲು ವಿಶ್ವಸಂಸ್ಥೆ, ಜಾಗತಿಕ ಆರೋಗ್ಯ ಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿಯಾಗಿರುವುದು ಸಂತಸವಾಗುತ್ತಿದೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಅವರ ಕಚೇರಿ ಹಾಗೂ ತಾನು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ನೆರೆ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಲಿದ್ದೇನೆ ಎಂದು ಕೂಡ ತರೂರ್ ಹೇಳಿದ್ದಾರೆ.

ತರೂರ್ ಅವರು ನಮ್ಮ ಪ್ರತಿನಿಧಿಯಾಗಿ ಜಿನೇವಾಕ್ಕೆ ಹೋಗಿಲ್ಲ. ಅವರು ನಮ್ಮ ಸರಕಾರದ ರಾಯಭಾರಿ ಕೂಡ ಅಲ್ಲ ಎಂದು ಕೇರಳ ರಾಜ್ಯದ ಮುಖ್ಯಮಂತ್ರಿ ಕಚೇರಿ ಹೇಳಿಕೆ ನೀಡಿದ ಬಳಿಕ ತರೂರ್ ಹೇಳಿಕೆ ಹೊಸ ತಿರುವು ಪಡೆದುಕೊಂಡಿದೆ.

ತರೂರ್ ಅವರನ್ನು ಪ್ರತಿಪಕ್ಷಗಳು ಟೀಕಿಸಿವೆ. ತರೂರ್ ಗಂಭೀರವಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಕಾಂಗ್ರೆಸ್, ‘‘ಶಶಿ ತರೂರ್ ಅವರು ಜವಾಬ್ದಾರಿಯುತ ವ್ಯಕ್ತಿ. ಅವರು ತಮ್ಮ ಹಳೆಯ ಸಂಪರ್ಕ ಬಳಸಿಕೊಂಡು ನೆರೆ ಪೀಡಿತ ಕೇರಳಕ್ಕೆ ವಿಶ್ವ ಸಂಸ್ಥೆಯಿಂದ ನೆರವು ಕೋರಿರುವ ಸಾಧ್ಯತೆ ಇದೆ. ಇದರಲ್ಲಿ ಯಾವುದೇ ತಪ್ಪಿಲ್ಲ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News