ಕೊಡಗು-ದಕ್ಷಿಣ ಕನ್ನಡ ಗಡಿಭಾಗದ ಕಲ್ಮಕಾರಿಗೂ ತಟ್ಟಿದ ಜಲಪ್ರಳಯದ ಬಿಸಿ

Update: 2018-08-21 16:42 GMT

►ಪಾಲದಲ್ಲಿ ಸಾಗುತ್ತಿದೆ ಜನಸಂಚಾರ

►ಮಳೆ ಮುಂದುವರಿದಲ್ಲಿ ಮತ್ತೆ ಸಂಪರ್ಕ ಕಡಿತದ ಭೀತಿ

ಮಂಗಳೂರು, ಆ.21: ವರುಣನ ಅರ್ಭಟಕ್ಕೆ ಈಗಾಗಲೇ ಕೊಡಗು ಜಿಲ್ಲೆ ಮುಳುಗಿ ತೀವ್ರ ಅನಾಹುತ ಸಂಭವಿಸಿರುವಂತೆಯೇ, ಈ ನಡುವೆ ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿ ಭಾಗವಾದ ಕಡ್ಮಕಲ್ ಹಾಗೂ ಕಲ್ಮಕಾರಿಗೂ ಜಲಪ್ರಳಯದ ಬಿಸಿ ತಟ್ಟಿದೆ.    

ಕೊಲ್ಲಮೊಗರು ಗ್ರಾಮದ ಭಾರ್ಚಿ ಹೊಳೆಯ 6 ಸಂಪರ್ಕ ಸೇತುವೆಗಳು ನೀರಿನಲ್ಲಿ ಭಾಗಶ: ಕೊಚ್ಚಿ ಹೋಗಿವೆ. ಸದ್ಯ ಸ್ಥಳೀಯರೇ ಸೇತುವೆಗಳಿಗೆ ಪರ್ಯಾಯವಾಗಿ ತಾತ್ಕಾಲಿಕ ಪಾಲವನ್ನು ನಿರ್ಮಿಸಿಕೊಂಡಿದ್ದರೂ, ಮತ್ತೆ ಪ್ರವಾಹದ ಬಂದಲ್ಲಿ ಇಲ್ಲಿನ ಸುಮಾರು 250 ಕುಟುಂಬಗಳ 700 ಮಂದಿ ಸಂಪರ್ಕ ಕಡಿತಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಮಂಗಳೂರಿನಿಂದ ಸುಮಾರು 130 ಕಿ.ಮೀ. ದೂರದ ಪಶ್ಚಿಮ ಘಟ್ಟದ ಪುಷ್ಪಗಿರಿ ಅರಣ್ಯ ತಪ್ಪಲಿನ ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿಭಾಗವಾದ ಕಲ್ಮಕಾರಿಗೆ ಆಯೋಜಿಸಲಾದ ಅಧ್ಯಯನ ಪ್ರವಾಸದ ಸಂದರ್ಭ ಸ್ಥಳೀಯರು ತಮ್ಮ ಸಂಕಷ್ಟಗಳ ಬಗ್ಗೆ ಮಾಧ್ಯಮದೆದುರು ತೆರೆದಿಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಒಂದು ಭಾಗ ಮಡಿಕೇರಿಗೆ ಸೇರಿದೆ. ಇತ್ತೀಚೆಗೆ ಕೊಡಗಿನಲ್ಲಿ ಜಲಪ್ರಳಯದಿಂದಾಗಿ ಲೋಡುಗಟ್ಟಲೆ ಮರಗಳು ಪ್ರವಾಹದ ನೀರಿನಲ್ಲಿ ತೇಲಿಕೊಂಡು ಮಡಿಕೇರಿಯಾಗಿ ಸುಳ್ಯದ ಕಲ್ಮಕಾರು ಮೂಲಕ ನುಗ್ಗಿ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಕಳೆದ ಶುಕ್ರವಾರ ಹಾಗೂ ಶನಿವಾರದಂದು ಜಲಪ್ರಳಯದಿಂದಾಗಿ ಇಲ್ಲಿನ ಐದು ಸಾರ್ವಜನಿಕ ಸಂರ್ಪಕದ ಸೇತುವೆಗಳು ಹಾಗೂ ಖಾಸಗಿಯವರಿಗೆ ಸೇರಿದ ಸೇತುವೆಯು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿ ಇದೀಗ ಕಾಂಕ್ರೀಟ್ ಸೇತುವೆಯ ಪಳೆಯುಳಿಕೆಗಳು ಪ್ರವಾಹದ ಅನಾಹುತಕ್ಕೆ ಸಾಕ್ಷಿಯಾಗಿವೆ. ಸದ್ಯ ಈ ಐದು ಸಾರ್ವಜನಿಕ ಸೇತುವೆಗಳನ್ನು ಸ್ಥಳೀಯರೇ ಪಾಲ (ಅಡಿಕೆ ಮರಗಳನ್ನು ಜೋಡಿಸಿ ನಿರ್ಮಿಸುವ)ಗಳನ್ನು ನಿರ್ಮಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.

‘‘1972ರಲ್ಲಿ ಇಲ್ಲಿ ಈ ರೀತಿಯ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಬಿಟ್ಟರೆ ಬಳಿಕ ಇದೇ ಮೊದಲ ಬಾರಿಗೆ ಇಂತಹ ಜಲಪ್ರಳಯವನ್ನು ನೋಡುತ್ತಿದ್ದೇವೆ. ಹಿಂದೆ ಪಾಲವನ್ನು ಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ಇದೀಗ 2015ರಲ್ಲಿ ನಾನು ಸ್ವಂತ ಸುಮಾರು 8 ಲಕ್ಷ ರೂ. ಖರ್ಚು ಮಾಡಿ ಈ ಸೇತುವೆಯನ್ನು ನಿರ್ಮಿಸಿದ್ದೆ. ಕಳೆದ ಶುಕ್ರವಾರ ಪ್ರವಾಹದಲ್ಲಿ ಸುಮಾರು 100 ಲೋಡ್‌ನಷ್ಟು ಬಂದ ಮರ ಕೊಂಬೆ ರೆಂಬೆಗಳ ಜತೆ ಸೇತುವೆಯ ಅರ್ಧ ಭಾಗ ಕೊಚ್ಚಿ ಹೋಗಿದೆ. ಈ ಬೃಹತ್‌ಪ್ರಮಾಣದ ಮರಗಳನ್ನು ಕ್ರೇನ್ ಬಳಸಿ ದಡಕ್ಕೆ ತರಲಾಗಿದೆ. ಸದ್ಯ ತಾತ್ಕಾಲಿಕವಾಗಿ ಪಾಲವನ್ನು ನಿರ್ಮಿಸಲಾಗಿದೆ. ನಿನ್ನೆ ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ (ಎಸಿ)ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಲ್ಲಿ ತೂಗು ಸೇತುವೆ ನಿರ್ಮಾಣದ ಭರವಸೆಯನ್ನು ನೀಡಿದ್ದಾರೆ. ಇದೇ ವೇಳೆ ಶೆಟ್ಟಿಗಟ್ಟದಲ್ಲಿ ಮಾಮೂಲು ಪಾಲವಿದೆ. ಇದೀಗ ಇಲ್ಲಿ ಸೇತುವೆ ನಿರ್ಮಿಸುವ ಭರವಸೆಯನ್ನು ಎಸಿಯವರು ನೀಡಿದ್ದಾರೆ’’ ಎಂದು ವೈ.ಪಿ. ಪ್ರಕಾಶ್ ಎಂಬವರು ಎಲದೇಲು ಸೇತುವೆಯ ಬಗ್ಗೆ ಮಾಹಿತಿ ಒದಗಿಸಿದರು.

ಕಾಂಕ್ರೀಟ್ ಸೇತುವೆಯಲ್ಲಿ ಪಿಕಪ್, ಜೀಪ್ ಎಲ್ಲಾ ಬರುತ್ತಿತ್ತು. ಸದ್ಯ ನಡೆದಾಡಲು ಪಾಲ ಮಾತ್ರವೇ ಇಲ್ಲಿನ ನಿವಾಸಿಗಳಿಗೆ ಸಂಪರ್ಕಕ್ಕೆ ಆಧಾರ. ‘‘ಬಾಳೆಬೈಲು (ಸಂತಡ್ಕ), ಕಾಜಿಮಡ್ಕ (ಮೆಂಟಕಜೆ), ಎಲದೇಲು, ಪಡ್ಪು, ಕಲ್ಮಕಾರು ಸೇತುವೆಗಳ ತಡೆಗೋಡೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಅಲ್ಲಿ ತಾತ್ಕಾಲಿಕವಾಗಿ ಪಾಲಗಳನ್ನು ಸಾರ್ವಜನಿಕರೇ ಕಳೆದ ಶನಿವಾರ, ರವಿವಾರದಂದು ನಿರ್ಮಿಸಿಕೊಂಡಿದ್ದೇವೆ. 1962ರಿಂದಲೇ ರಸ್ತೆ ಬಗ್ಗೆ ಪ್ರಸ್ತಾಪವಿದೆ. ಕಡಮಕಲ್ ಗಡಿಭಾಗದಿಂದ ಗಾಳಿಬೀಡು ಮೂಲಕ ಮಡಿಕೇರಿ ಪೇಟೆಯವರೆಗೆ ಸುಮಾರು 27 ಕಿ.ಮೀ. ಇಲ್ಲಿಂದ ಸುಳ್ಯ ಆಗಿ ಮಡಿಕೇರಿಯನ್ನು ಸೇರಬೇಕಾದರೆ 100 ಕಿ.ಮೀ. ಕ್ರಮಿಸಬೇಕಾಗುತ್ತದೆ. ಇಲ್ಲಿ ಧರ್ಮಪಾಲ ರಾಜ್ಯಪಾಲ ಆಗಿದ್ದ ವೇಳೆ ಗಾಳಿಬೀಡು ರಸ್ತೆಗೆ ಅಡಿಪಾಯ ಹಾಕಲಾಗಿತ್ತು. ಆದರೆ ಬಳಿಕ ವನ್ಯಧಾಮಕ್ಕೆ ಒಳಪಟ್ಟ ಹಿನ್ನೆಲೆಯಲ್ಲಿ ರಸ್ತೆ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ. ಆ ರಸ್ತೆ ಆದಲ್ಲಿ ಸ್ಥಳೀಯರಿಗೆ ತುಂಬಾ ಉಪಕಾರವಾಗಲಿದೆ. ಕಲ್ಮಕಾರು ಹಾಗೂ ಕಡಮಕಲ್‌ನವರಿಗೂ ಮಡಿಕೇರಿ ಬಹಳಷ್ಟು ಹತ್ತಿರವಾಗಲಿದೆ’’ಎಂಬುದು ಸ್ಥಳೀಯರ ಅಭಿಪ್ರಾಯ.

ಶೆಟ್ಟಿಕಟ್ಟದಲ್ಲಿ 25ಕ್ಕೂ ಅಧಿಕ ಮನೆಗಳವರು ಅತಂತ್ರ ಸ್ಥಿತಿಯಲ್ಲಿ!

ಶೆಟ್ಟಿಕಟ್ಟ ಹೊಳೆಯ ಸಮೀಪದಲ್ಲಿ ಸುಮಾರು 25ಕ್ಕೂ ಅಧಿಕ ಕುಟುಂಬಗಳು, ಶುಕ್ರವಾರದ ಪ್ರವಾಹದಿಂದ ತತ್ತರಿಸಿವೆ. ಇಲ್ಲಿನ ಮನೆಗಳ ಅಂಗಳದವರೆಗೂ ನೀರು ನುಗ್ಗಿ ದ್ವೀಪದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿ ಮಳೆಗಾಲದಲ್ಲಿ ಜನರಿಗೆ ನಡೆದಾಡಲು ಬಿದಿರಿನ ತೂಗು ಸೇತುವೆಯೊಂದೇ ಆಧಾರ. ಅದೂ ಪ್ರವಾಹದ ವೇಳೆ ಮುಳುಗುವ ಭೀತಿಯನ್ನು ಎದುರಿಸುತ್ತಿದೆ. ಸದ್ಯ ಇಲ್ಲಿನ ಸುಮಾರು 14 ರಷ್ಟು ಕುಟುಂಬಗಳು ಮನೆ ಬಿಟ್ಟಿವೆ. ಅವರಲ್ಲಿ 7 ಮಲೆಕುಡಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ ಕೆಲವು ಮನೆಗಳವರು ಹಗಲು ಹೊತ್ತು ಬಂದು ದನ ಕರುಗಳಿಗೆ ಮೇವು ಹಾಕಿ ರಾತ್ರಿ ಹೊತ್ತು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಾರೆ. ಸದ್ಯ ಇಲ್ಲಿ ಸೇತುವೆ ನಿರ್ಮಾಣದ ಭರವಸೆ ದೊರಕಿದೆ ಎನ್ನುತ್ತಾರೆ ಸ್ಥಳೀಯರು.

ರಾತ್ರಿ ಹೊತ್ತು ಸಂಬಂಧಿಕರ ಮನೆಯೇ ಗತಿ!

‘‘ಶುಕ್ರವಾರದ ಪ್ರವಾಹಕ್ಕೆ ನಮ್ಮ ಮನೆಯೊಳಗೆ ನೀರು ನುಗ್ಗಿ ಹಾಸಿಗೆ ಸೇರಿದಂತೆ ಮನೆಯ ವಸ್ತುಗಳೆಲ್ಲಾ ನೀರು ಪಾಲಾಗಿತ್ತು. ಇದೀಗ ಹಗಲು ಹೊತ್ತು ಇಲ್ಲಿದ್ದು, ರಾತ್ರಿ ಹೊತ್ತು ಸಂಬಂಧಿಕರ ಮನೆಗೆ ಹೋಗುತ್ತೇವೆ’’ ಎನ್ನುತ್ತಾರೆ ಸಂತಡ್ಕ ನಿವಾಸಿ ದಿನೇಶ್ ಕೆ.ವಿ. ತಿರುಮಲೇಶ್ವರ ಎಂಬವರ ಮನೆ ಬಳಿ ಗುಡ್ಡ ಕುಸಿತಗೊಂಡು ಬಂಡೆಕಲ್ಲು ಮನೆಗೆ ಅಪ್ಪಳಿಸಿದೆ. ಮನೆಯ ಒಂದು ಕೋಣೆ ನಾಶಗೊಂಡಿದೆ. ಮನೆಯ ಇನ್ನೊಂದು ಕೋಣೆಯಲ್ಲಿ ಮನೆ ಮಂದಿ ಮಲಗಿದ್ದರಿಂದ ಪ್ರಾಣ ಹಾನಿ ಸಂಭವಿಸಿಲ್ಲ. ಕಲ್ಮಕಾರು ಪನ್ನೆ ಬಳಿಯ ಸೂರ್ಯನಾರಾಯಣ ಭಟ್ ಅವರ ತೋಟಕ್ಕೆ ಪ್ರವಾಹ ನುಗ್ಗಿದ ಪರಿಣಾಮ ಮರದಿಂದ ಕೀಳಲಾಗಿದ್ದ 4000ಕ್ಕೂ ಅಧಿಕ ತೆಂಗಿನಕಾಯಿಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯ

ಕೊಡಗಿನ ಗಾಳಿಬೀಡು ಗ್ರಾಮ ಪಂಚಾಯತ್‌ಗೆ ಸೇರಿದ ಕಡ್ಮಕಲ್ ಎಸ್ಟೇಟ್‌ನೊಳಗಿರುವ ಖಾಸಗಿ ಸೇತುವೆ ಬಹುತೇಕ ಕೊಚ್ಚಿ ಹೋಗಿದೆ. ಎಸ್ಟೇಟ್‌ನಲ್ಲಿ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 200ರಷ್ಟು ಕಾರ್ಮಿಕರು ನೆಲೆಸಿದ್ದು, ಅವರು ಸದ್ಯ ಸುಳ್ಯ (ಕಲ್ಮಕಾರು ಜಂಕ್ಷನ್) ಅಥವಾ ಮಡಿಕೇರಿಗೆ ಸಂಪರ್ಕವನ್ನು ಕಳೆದುಕೊಳ್ಳುವಂತಾಗಿದೆ. ಈ ಸೇತುವೆಗೂ ಸದ್ಯ ಅಡಿಕೆ ಮರಗಳ ಪಾಲವನ್ನು ನಿರ್ಮಿಸಲಾಗಿದೆ. ‘‘ಶನಿವಾರ ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಭಾರಿ ಪ್ರವಾಹದ ನೀರಿಗೆ ಸೇತುವೆ ಕೊಚ್ಚಿ ಹೋಗಿದ್ದನ್ನು ಕಂಡು ದಿಕ್ಕೇ ತೋಚದಂತಾಗಿತ್ತು. ಸದ್ಯ ತಾತ್ಕಾಲಿಕವಾಗಿ ಪಾಲ ಹಾಕಲಾಗಿದೆ. ಮಕ್ಕಳು ಕಲ್ಮಕಾರು ಶಾಲೆಗೆ ಹೋಗುತ್ತಿದ್ದು, ಸದ್ಯ ಅವರನ್ನು ಕಳುಹಿಸಲು ಭಯವಾಗುತ್ತಿದೆ’’ ಎನ್ನುತ್ತಾರೆ ಅಸ್ಸಾಂ ಮೂಲದ ಸದ್ಯ ಐದು ವರ್ಷಗಳಲ್ಲಿ ಎಸ್ಟೇಟ್‌ನಲ್ಲಿ ಕುಟುಂಬ ಸದಸ್ಯರ ಜತೆ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಮುನ್ನಿ.

ಉಪ್ಪಳಿಕೆ ರಸ್ತೆಯಲ್ಲಿ ಭೂಕುಸಿತ: ಘನ ವಾಹನ ಸಂಚಾರ ಸ್ಥಗಿತ

ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಸಾಗುವ ಉಪ್ಪಳಿಕೆ ಎಂಬಲ್ಲಿ ರಸ್ತೆಯು ಭಾರಿ ಪ್ರಮಾಣದಲ್ಲಿ ಭೂಕುಸಿತಕ್ಕೆ ಒಳಗಾಗಿದೆ. ಇದೀಗ ಅಲ್ಲಿ ಘನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ರಸ್ತೆ ಇನ್ನೂ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯ ನಡುವೆಯೇ ಕಾರ್ಮಿಕರು ಅಲ್ಲಿ ಮರಳಿನ ಚೀಲಗಳನ್ನು ಹಾಕಿ ದುರಸ್ತಿ ಕಾಮಗಾರಿ ನಡೆಸುತ್ತಿದ್ದಾರೆ.

ಪಾಲದ ಮೇಲಿನ ಸರ್ಕಸ್ ಪಯಣ!

ಕಲ್ಮಕಾರುವಿನಲ್ಲಿ ಸೇತುವೆಗಳು ನೀರುಪಾಲಾಗಿರುವ ಕಾರಣ ಇಲ್ಲಿನ ಸ್ಥಳೀಯರು ಸದ್ಯ ಪಾಲದಲ್ಲಿ ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಹಿರಿಯ ನಾಗರಿಕರು ಹಾಗೂ ಮಕ್ಕಳಂತೂ ಈ ಅಡಿಕೆ ಮರ ಅಥವಾ ಬಿದಿರಿನ ಪಾಲಗಳಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ಈ ಪ್ರದೇಶದಲ್ಲಿ ಮಳೆ, ಪ್ರವಾಹದ ನೀರು ಹೊಸತೇನು ಅಲ್ಲ ಎನ್ನುವ ಸ್ಥಳೀಯರು, ಈ ಬಾರಿಯ ಪ್ರವಾಹ ಮಾತ್ರ ತಮ್ಮ ಸಂಪರ್ಕ ಕೊಂಡಿಯನ್ನೇ ಕಸಿದುಕೊಂಡಿದೆ ಎಂದು ಬೇಸರಿಸುತ್ತಾರೆ. ಮಾತ್ರವಲ್ಲದೆ, ತೋಟ, ಮನೆಗಳಿಗೆ ನೀರು ನುಗ್ಗಿ ಅಪಾಯದ ಮುನ್ಸೂಚನೆಯನ್ನೂ ನೀಡಿದೆ ಎನ್ನುತ್ತಾರೆ.

ಚಿತ್ರಗಳು: ಆಝಾದ್ ಕಂಡಿಗ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News