ವಿದ್ಯಾರ್ಥಿಗಳು, ಹೆತ್ತವರಲ್ಲಿ ಜಾಗೃತಿ ಮೂಡಿಸಿ: ನ್ಯಾ.ವೆಂಕಟೇಶ್ ನಾಯ್ಕಾ

Update: 2018-08-22 14:52 GMT

ಉಡುಪಿ, ಆ.21: ಯುವಜನತೆ ಹಾಗೂ ವಿದ್ಯಾರ್ಥಿಗಳು ಇಂದು ಮಾದಕ ವಸ್ತುಗಳಿಗೆ ಹೆಚ್ಚೆಚ್ಚು ದಾಸರಾಗುತಿದ್ದಾರೆ. ಈ ಪಿಡುಗನ್ನು ತಡೆಗಟ್ಟಲು ಇವುಗಳ ಕುರಿತು ವಿದ್ಯಾರ್ಥಿಗಳು ಹಾಗೂ ಹೆತ್ತವರಲ್ಲಿ ಅರಿವು ಮತ್ತು ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕಾ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್‌ಕ್ಲಬ್‌ಗಳ ಸಹಯೋಗದೊಂದಿಗೆ ಮಾದಕ ವ್ಯಸನ ವಿರೋಧಿ ಮಾಸಾಚಾರಣೆಯ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಗರದ ಬಿಗ್‌ಬಜಾರ್‌ನಲ್ಲಿ ಆಯೋಜಿಸಿದ್ದ ‘ಸೆಲ್ಫಿ ವಿದ್ ಸಹಿ ಸಂಗ್ರಹ ಜಾಗೃತಿ ಅಭಿಯಾನ’ವನ್ನು ಮಾದಕ ವ್ಯಸನದ ವಿರುದ್ಧ ಸಂದೇಶ ಬರೆದು ಸಹಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.

ಮಾದಕ ವಸ್ತುಗಳ ವ್ಯಸನ ಇಂದು ದೇಶದ ಬಹುದೊಡ್ಡ ಪಿಡುಗು. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟದಿದ್ದರೆ ದೇಶದ ಆರ್ಥಿಕತೆ ಹಾಗೂ ಸಮಾಜಕ್ಕೆ ಬಹುದೊಡ್ಡ ನಷ್ಟವಾಗಲಿದೆ. ಮಾದಕ ವ್ಯಸನದ ವಿರುದ್ಧ 1940ರಲ್ಲಿ ಜಾರಿಯಾದ ಡ್ರಗ್ಸ್ ಮತ್ತು ಕಾಸ್ಮಟಿಕ್ ಆ್ಯಕ್ಟ್ ಹಾಗೂ 1988ರ ಎನ್‌ಡಿಪಿಎಸ್ ಆ್ಯಕ್ಟ್‌ನ ಉಪಬಂದಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಮಾದಕ ವ್ಯಸನಿಗಳ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಇಂಥವರ ವಿರುದ್ಧ ಪ್ರಕರಣ ದಾಖಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸರು ಸ್ತುತ್ಯಾರ್ಹ ಕಾರ್ಯ ಮಾಡುತಿದ್ದಾರೆ. ಮಾದಕ ವ್ಯಸನಕ್ಕೆ ತುತ್ತಾಗುವ ಯುವಕರು, ಅನಾಥರು, ನಿರ್ಲಕ್ಷಕ್ಕೊಳಗಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ ಎಂದರು.

ಶಾಲಾ-ಕಾಲೇಜುಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಸಂಘಟಿಸಿ ಅರಿವು ಮೂಡಿಸಬೇಕು. ಅದೇ ರೀತಿ ಹೆತ್ತವರನ್ನೂ ಪಿಡುಗಿನ ವಿರುದ್ಧ ಜಾಗೃತ ಗೊಳಿಸಬೇಕು ಎಂದು ವೆಂಕಟೇಶ್ ನಾಯ್ಕೆ ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಇಂಥ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಒಳಗೊಳ್ಳುವ ಅಭಿಯಾನಗಳ ಮೂಲಕ ನಿರ್ದಿಷ್ಟ ಸಂದೇಶಗಳು ಬೇಗನೇ ಜನರನ್ನು ತಲುಪಲು ಸಾಧ್ಯವಿದೆ. ಸಮಸ್ಯೆಯ ತೀವ್ರತೆ ಕೂಡಲೇ ಜನರಿಗೆ ಮನದಟ್ಟಾಗುತ್ತದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ತುಳು ರಂಗಭೂಮಿ ನಟ ಹಾಗೂ ನಿರ್ದೇಶಕ ಸುಂದರ ರೈ ಮಂದಾರ ಅವರು ಹಸ್ತದ ಬಣ್ಣ ಹಚ್ಚುವ ಮೂಲಕ ಸೆಲ್ಫಿ ವಿದ್ ಸಹಿ ಸಂಗ್ರಹವನ್ನು ಉದ್ಘಾಟಿಸಿ ಮಾತನಾಡಿ, ಹದಿಹರೆಯದಲ್ಲಿ ಯುವಜನತೆ ದಾರಿ ತಪ್ಪಿ ದುಷ್ಟ ಹಾದಿಯತ್ತ ಆಕರ್ಷಿತರಾಗುವ ಮೂಲಕ ಬದುಕನ್ನು ಹಾಳು ಮಾಡಿಕೊಳ್ಳುತಿದ್ದು, ಇದನ್ನು ತಡೆಯಲು ಇಂಥ ಅಭಿಯಾನಗಳು ಉಪಯುಕ್ತ ಎಂದರು.

ಕಾರ್ಯಕ್ರಮದಲ್ಲಿ ಎಎಸ್ಪಿ ಕುಮಾರಚಂದ್ರ, ಮಂಗಳೂರಿನ ಉದ್ಯಮಿ ಜೊಯೆಲ್ ಸೋನ್ಸ್, ಬಿಗ್ ಬಜಾರ್‌ನ ಮ್ಯಾನೇಜರ್ ರಾಘವೇಂದ್ರ ಕೆ. ಉಪಸ್ಥಿತರಿದ್ದರು. ಪತ್ರಕರ್ತೆ ಪಲ್ಲವಿ ಸಂತೋಷ್ ಅತಿಥಿಗಳನ್ನು ಸ್ವಾಗತಿಸಿದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ.ನಿಂಬರಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗರಾಜ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಅಶೋಕ್ ಪೂಜಾರಿ ವಂದಿಸಿದರು.

ಮಾದಕ ವ್ಯಸನ ವಿರೋಧಿ ಸಹಿ ಸಂಗ್ರಹ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಸಹಿ ಹಾಕಿದ್ದಲ್ಲದೇ, ಹಸ್ತದ ಬಣ್ಣವನ್ನು ಹಚ್ಚಿ ಬೆಂಬಲ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News