ಮಾನಸಿಕ ಖಿನ್ನರೊಂದಿಗೆ ಹಬ್ಬವನ್ನಾಚರಿಸಿದ ಸಚಿವ ಖಾದರ್

Update: 2018-08-22 16:01 GMT

ಉಳ್ಳಾಲ, ಆ. 22: ತೊಕ್ಕೊಟ್ಟು ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸದಸ್ಯರು ಪ್ರತೀ ಸಲದಂತೆ ಈ ಬಾರಿಯೂ ಬಕ್ರೀದ್ ಹಬ್ಬವನ್ನು ಉಳ್ಳಾಲ ಸೋಮೇಶ್ವರದ ಪಶ್ಚಿಮ್ ರಿಹ್ಯಾಬ್ ಸೆಂಟರ್‌ನ ಮಾನಸಿಕ ಖಿನ್ನ ರೋಗಿಗೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು.

ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮಾನಸಿಕ ಖಿನ್ನರೊಂದಿಗೆ ಹಬ್ಬವನ್ನು ಆಚರಿಸುವುದರ ಮೂಲಕ ಹರ್ಷಪಟ್ಟರು. ಮನುಷ್ಯನ ಜೀವನ ಏನೆಂದು ಹೇಳಲು ಅಸಾಧ್ಯ. ಇಂದು ಇಲ್ಲಿ ಖಿನ್ನತೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವವರ ಹಿಂದಿನ ಜೀವನ ಹೇಗಿತ್ತೆಂಬುದರ ಬಗ್ಗೆ ಅವರೇ ಬಲ್ಲರು. ಇರುವಷ್ಟು ದಿನ ನಾವು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬದುಕಿ ಸಾರ್ಥಕತೆಯನ್ನು ಕಾಣಬೇಕು. ಇದಕ್ಕೆ ಬಕ್ರೀದ್ ಹಬ್ಬವೇ ಪ್ರೇರಣೆಯಾಗಲಿ ಎಂದು ಹೇಳಿದರು.

ಹೆಲ್ಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಮಾತನಾಡಿ, ಯಾರೂ ಇಲ್ಲದ ಅನಾಥರು ಹಬ್ಬವನ್ನು ಆಚರಿಸಬೇಕೆಂಬ ನಿಟ್ಟಿನಲ್ಲಿ ಕಳೆದು ಮೂರು ವರ್ಷಗಳಿಂದ ಸತತವಾಗಿ ಪಶ್ಚಿಮ್ ರಿಹ್ಯಾಬ್ ಸೆಂಟರ್‌ನಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅಸಕ್ತರನ್ನು ಸಲಹಲು ಇಂತಹುದೇ ಅನಾಥಾಶ್ರಮವನ್ನು ತೆರೆಯುವ ಮಹಾದಾಸೆಯಿದ್ದು ದೇವರು ಅದನ್ನು ಶೀಘ್ರವೇ ನೆರವೇರಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ರಿಯಲ್ ಟೆಕ್, ಆಸಿಫ್ ಅಮೆಕೋ, ಉದ್ಯಮಿ ಅಬ್ದುಲ್ ಕಮಲ್, ಉದ್ಯಮಿ ಶಿವಪ್ರಕಾಶ್ ಶೆಟ್ಟಿ, ಸಿರಾರ್ ಅಭಯಾ ಪ್ಯಾಶನ್, ತೌಸೀಫ್ ಯು.ಟಿ, ಜಲೀಲ್ ಜೆ.ಜೆ, ತನ್ವೀರ್ ಅಹ್ಮದ್, ಝಾಕೀರ್ ಹುಸೈನ್, ಮುಸ್ತಫಾ ರಿಯಲ್ ಟೆಕ್, ಯು.ಪಿ.ಸುಲೈಮಾನ್, ಶಕೀಲ್ ತುಂಬೆ, ರಿಹಾಬ್ ಸೆಂಟರ್‌ನ ರೋಹಿತ್ ಉಪಸ್ಥಿತರಿದ್ದರು.

ಉಳ್ಳಾಲ: ಕೊಡಗಿನಲ್ಲಿ ಆಗಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರ ಜತಗೆ ನಾವಿದ್ದೇವೆ. ಎಲ್ಲಾ ಧರ್ಮದವರು ತಮ್ಮ ಆರಾಧನಾಲಯಗಳಲ್ಲಿ ಧರ್ಮ ನೋಡದೆ ಆಶ್ರಯ ನೀಡಿರುವುದು ರಾಜ್ಯದ ಜನತೆಯ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಕ್ರೀದ್ ಹಬ್ಬದ ಸಂದೇಶವಾಗಿರುವ ತ್ಯಾಗ, ತಾಳ್ಮೆ, ಪ್ರೀತಿ, ವಿಶ್ವಾಸದಲ್ಲಿ ಬಾಳುವಂತಹವ ವಾತಾವರಣ ನಿರ್ಮಿಸುವಲ್ಲಿ ಎಲ್ಲರೂ ತೊಡಗಬೇಕಿದೆ. ಬಕ್ರೀದ್ ಹಬ್ಬ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಎಲ್ಲಾ ಧರ್ಮದವರು ಸೇರಿಕೊಂಡು ಆಚರಿಸಿದಾಗ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಹಬ್ಬದ ಸಂದೇಶವನ್ನು ಎಲ್ಲರಿಗೂ ತಿಳಿಸಿ ಪರಸ್ಪರ ಜೊತೆಯಾಗುವ ಮೂಲಕ ಉತ್ತಮ ಸಮಾಜದ ನಿರ್ಮಾಣವಾಗಬೇಕಿದೆ. ಕಷ್ಟದ ಕಾಲದಲ್ಲಿಯೂ ಎಲ್ಲರೂ ಜೊತೆಯಾಗುವಂತಹ ಮನೋಸ್ಥಿತಿಯನ್ನು ಬೆಳೆಸಬೇಕಿದೆ. ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಸಂತ್ರಸ್ತರ ನೋವಿನಲ್ಲಿ ಎಲ್ಲರೂ ಜೊತೆಗಿದ್ದೇವೆ. ಮುಸ್ಲಿಂಮರು ಹಿಂದೂ ಆರಾಧನಾಲಯಗಳಲ್ಲಿ, ಹಿಂದೂಗಳು ಮುಸ್ಲಿಂ ಆರಾಧನಾಲಯಗಳಲ್ಲಿ ಹಾಗೂ ಕ್ರೈಸ್ತರು ಸಂತ್ರಸ್ತರಿಗೆ ಸಹಕರಿಸುವ ಮೂಲಕ ಮಾನವೀಯತೆಯನ್ನು ವೆುರೆದಿರುವ ಕಾರ್ಯ ಆಗಿದೆ ಎಂದರು.

ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಮಾತನಾಡಿ, ಮುಸ್ಲಿಂಮರು ಬಕ್ರೀದ್ ಹಬ್ಬದ ಪ್ರಯುಕ್ತ ಸರ್ವಧರ್ಮದ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಮೂಲಕ ಸೌಹಾರ್ದತೆಯನ್ನು ಕಾಪಾಡುವ ಕೆಲಸವಾಗಿದೆ. ತ್ಯಾಗ, ಬಲಿದಾನದ ಸಂಕೇತವಾಗಿರುವ ಹಬ್ಬವನ್ನು ನಾಡಿಗೆ ಒಳಿತನ್ನು ಕರುಣಿಸಲಿ ಎಂದು ಶುಭಹಾರೈಸಿದರು.

ಖತೀಬರಾದ ಅಝೀರ್ ಬಾಖವಿ ದುಆ ನೆರವೇರಿಸಿದರು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು.ಟಿ ಇಲ್ಯಾಸ್, ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯೀಲ್,  ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಇಬ್ರಾಹೀಂ ಕಕ್ಕೆತೋಟ, ಅರೆಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ  ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಸದಸ್ಯರಾದ ಮುಸ್ತಾಫ ಮಂಚಿಲ, ಕೆ.ಎನ್.ಮಹಮೂದ್. ಇಬ್ರಾಹಿಂ ಉಳ್ಳಾಲಬೈಲ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News