ಮಳೆಯಿಂದ ಶಿರಾಡಿ ಘಾಟಿ ಬಂದ್ : ಮಂಗಳೂರು - ಬೆಂಗಳೂರು ಪ್ರಯಾಣ ಹೇಗೆ ?

Update: 2018-08-23 08:02 GMT

ಮಂಗಳೂರು, ಆ. 23: ಭಾರೀ ಮಳೆಯಿಂದ ಶಿರಾಡಿ ಘಾಟ್ ಮತ್ತು ಸಂಪಾಜೆ ರಸ್ತೆಯು ಶಿಥಿಲಗೊಂಡು ಸಂಚಾರಕ್ಕೆ ಸಂಪೂರ್ಣ ಬಂದ್ ಆದ ಹಿನ್ನಲೆಯಲ್ಲಿ ಮಂಗಳೂರು-ಬೆಂಗಳೂರು ಪ್ರಯಾಣವು ದುಸ್ತರವಾಗಿದೆ. ಸರಕಾರಿ ಮತ್ತು ಖಾಸಗಿ ಬಸ್ಸುಗಳು ಬೇರೆ ಮಾರ್ಗಗಳ ಮೂಲಕ ಬೆಂಗಳೂರು ಸೇರಿದರೆ, ರೈಲುಗಳು ಕೇರಳದ ಮೂಲಕ ಬೆಂಗಳೂರು ಸೇರುತ್ತಿವೆ. ಇದರಿಂದ ಅಕ್ಷರಶಃ ಪ್ರಯಾಣಿಕರು ಹೈರಾಣಾಗಿದ್ದು, ಯಥಾಸ್ಥಿತಿಗೆ ಮರಳಲು ಇನ್ನೆಷ್ಟು ದಿನ ಬೇಕಾಗಬಹುದು ಎಂದು ಸಾರ್ವಜನಿಕರು ಪ್ರಶ್ನಿಸಿ ಕಾಲ ಕಳೆಯುವಂತಾಗಿದೆ.

ಕೆಎಸ್ಸಾರ್ಟಿಸಿ ರಾಜಹಂಸ ಬಸ್ಸುಗಳು ಚಾರ್ಮಾಡಿ ಘಾಟ್ ಮೂಲಕ ಬೆಂಗಳೂರು ಸೇರುತ್ತಿವೆ. ವೋಲ್ವೊ ಬಸ್‌ಗಳು ಕೊಟ್ಟಿಗೆಹಾರ, ಕಳಸ, ಕುದುರೆಮುಖ ಮಾರ್ಗವಾಗಿ ಚಲಿಸುತ್ತಿವೆ. ಶಿರಾಡಿ ಮತ್ತು ಸಂಪಾಜೆಯಲ್ಲಿ ಚಲಿಸುವ ವಾಹನಗಳೆಲ್ಲವೂ ಕೂಡಾ ಇದೇ ಮಾರ್ಗದಲ್ಲಿ ಚಲಿಸುವಂತಾಗಿವೆ. ಅಲ್ಲಲ್ಲಿ ಸಂಚಾರ ದಟ್ಟಣೆ ಎದುರಾದರೆ ಪ್ರಯಾಣದ ಅವಧಿಯೂ ಹೆಚ್ಚಾಗಲಿದ್ದು, ಇದರಿಂದ ನಿಗದಿತ ಸಮಯಕ್ಕೆ ಬೆಂಗಳೂರು ಅಥವಾ ಮಂಗಳೂರು ತಲುಪುವವರು ಒಂದೆರಡು ಗಂಟೆ ಮುಂಚಿತವಾಗಿ ಪ್ರಯಾಣ ಬೆಳೆಸುವುದು ಉತ್ತಮವಾಗಿದೆ ಎಂಬ ಮಾತು ಅಧಿಕಾರಿ ವಲಯದಿಂದಲೇ ಕೇಳಿ ಬರುತ್ತಿವೆ.

ಕೇರಳದ ಮೂಲಕ ರೈಲು: ಭಾರೀ ಮಳೆ, ಭೂ ಕುಸಿತ ಇತ್ಯಾದಿಯಿಂದಾಗಿ ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳು ಕೇರಳದ ಮೂಲಕ ಚಲಿಸುತ್ತಿವೆ. ಅಂದರೆ ಮಂಗಳೂರು ಸೊರ್ಣೂರು, ಪಾಲಕ್ಕಾಡ್, ಕೊಯಂಬತ್ತೂರು, ಈರೋಡ್, ಜೇಲಾರಪೇಟೆ ಮೂಲಕ ರಾತ್ರಿ ಹೊತ್ತಿನಲ್ಲಿ ಕೇವಲ ಒಂದು ರೈಲು ಸಂಚರಿಸುತ್ತಿದೆ. ರೈಲು 9 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ಅಂದರೆ ಸುಮಾರು 15 ಗಂಟೆ ರೈಲು ಯಾನ ಮಾಡಬೇಕಾಗುತ್ತದೆ.

ಈ ಮಧ್ಯೆ ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲೂ ಭಾರೀ ಇಳಿಮುಖವಾಗಿದೆ. ಹಾಗಾಗಿ ಕೆಎಸ್ಸಾರ್ಟಿಸಿ ರಾಜಹಂಸ ಮತ್ತು ವೋಲ್ವೊ ಬಸ್‌ಗಳು ಸದ್ಯ ಹಗಲು ಮತ್ತು ರಾತ್ರಿ ತಲಾ ನಾಲ್ಕರಂತೆ ಚಲಿಸುತ್ತಿವೆ.

ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಷ್ಟಿಲ್ಲ. ಹೆದ್ದಾರಿಯು ಸಂಪೂರ್ಣ ದುರಸ್ತಿಯಾಗದ ಹೊರತು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇಲ್ಲ. ಸದ್ಯ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಂಡಂತೆ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು ಎಂದು ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ದೀಪಕ್ ತಿಳಿಸಿದ್ದಾರೆ.

ಖಾಸಗಿ ಬಸ್‌ಗಳು ಕೂಡಾ ಮಂಗಳೂರು-ಬೆಂಗಳೂರು ಪ್ರಯಾಣದ ದಾರಿಯನ್ನು ಬದಲಿಸಿವೆ. ಶಿರಾಡಿಯ ಬದಲು ಚಾರ್ಮಾಡಿಯನ್ನೇ ಅವಲಂಬಿಸಿವೆ. ಕುಂದಾಪುರದ ಪರಿಸರದ ಪ್ರಯಾಣಿಕರಿಗಾಗಿ ಖಾಸಗಿ ಬಸ್‌ಗಳು ಶಿವಮೊಗ್ಗದ ದಾರಿ ಹಿಡಿದರೆ, ಉಡುಪಿಯ ಪ್ರಯಾಣಿಕರನ್ನು ಮಂಗಳೂರು-ಚಾರ್ಮಾಡಿ ಮೂಲಕವೇ ಬೆಂಗಳೂರಿಗೆ ಕರೆದೊಯ್ಯುತ್ತಿವೆ.

ಈ ಬಗ್ಗೆ ದುರ್ಗಾಂಭ ಮೋಟರ್ಸ್‌ನ ಮಾಲಕ ಸದಾನಂದ ಚಾತ್ರ ಮಾತನಾಡಿ ಈಗ ಮೊದಲಿಂತೆ ಪ್ರಯಾಣಿಕರಿಲ್ಲ. ಇರುವ ಒಂದಷ್ಟು ಪ್ರಯಾಣಿಕರನ್ನು ನಾವು ಚಾರ್ಮಾಡಿಯ ಮೂಲಕವೇ ಕರೆದೊಯ್ಯುತೇವೆ. ಕುಂದಾಪುರದ ಪ್ರಯಾಣಿಕರಿಗೆ ಶಿವಮೊಗ್ಗ ರಸ್ತೆಯನ್ನು ಬಳಸಿದರೆ, ಉಡುಪಿಯಿಂದೀಚಿನ ಪ್ರಯಾಣಿಕರನ್ನು ಚಾರ್ಮಾಡಿ ರಸ್ತೆ ಮೂಲಕವೇ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು-ಮಂಗಳೂರು ಮಧ್ಯೆ ಎಲ್ಲಾ ರೀತಿಯ ವಾಹನಗಳು ಹಾಸನ-ಬೇಲೂರು-ಮೂಡಿಗೆರೆ-ಚಾರ್ಮಾಡಿ-ಉಜಿರೆ ಮಾರ್ಗವಾಗಿ ಚಲಿಸಬಹುದಾಗಿದೆ. ಅಲ್ಲದೆ ಕೊಟ್ಟಿಗೆಹಾರ-ಕಳಸ-ಕುದುರೆ ಮುಖ-ಮಾಲಘಾಟ್-ಕಾರ್ಕಳ ಮಾರ್ಗವಾಗಿಯೂ ಚಲಿಸಬಹುದಾಗಿದೆ. ಅಲ್ಲದೆ ಬೆಂಗಳೂರು-ಶಿವಮೊಗ್ಗ-ಆಯನೂರು-ಮಾಸ್ತಿಕಟ್ಟೆ-ಬಾಳೆಬರೆ ಘಾಟಿ-ಹೊಸಂಗಡಿ-ಸಿದ್ಧಾಪುರ-ಕುಂದಾಪುರ-ಉಡುಪಿ ಮೂಲಕವೂ ಮಂಗಳೂರು ತಲುಪಬಹುದಾಗಿದೆ. ಇನ್ನು ಬೆಂಗಳೂರು - ಮಂಗಳೂರು ಮಧ್ಯೆ ಮಿನಿ ಬಸ್ ಮತ್ತು ಅದಕ್ಕಿಂತ ಸಣ್ಣ ವಾಹನಗಳು ಶಿವಮೊಗ್ಗ- ತೀರ್ಥಹಳ್ಳಿ- ಆಗುಂಬೆ- ಉಡುಪಿ ಮಾರ್ಗವಾಗಿ ಚಲಿಸಬಹುದಾಗಿದೆ. ವಾಹನಗಳ ದಟ್ಟಣೆ ಹೆಚ್ಚಾದಂತೆ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗುವುದು ಮತ್ತು ಇದರಿಂದ ತಲುಪಬೇಕಾದ ಸ್ಥಳಗಳಿಗೆ ಹೆಚ್ಚು ಸಮಯ ಬೇಕಾಗಬಹುದು. 

ಒಟ್ಟಿನಲ್ಲಿ ಹೆದ್ದಾರಿಯ ಘಾಟಿಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮಂಗಳೂರು ವಿಭಾಗದಿಂದ ಹೊರಡುವ ವಾಹನಗಳು ಚಾರ್ಮಾಡಿ, ಆಗುಂಬೆ ದಾರಿ ಬಳಸುವುದು ಸೂಕ್ತ ಮತ್ತು ಕುಂದಾಪುರ, ಉಡುಪಿ ಪ್ರದೇಶದಿಂದ ಹೊರಡುವ ವಾಹನಗಳು ಮಾಲಘಾಟಿ, ಬಾಳೆಬರೆ ಘಾಟಿ ರಸ್ತೆ ಬಳಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News