ಪೆನ್‍ ಡ್ರೈವ್‍ ಗೆ 16 ಸಾವಿರ ರೂ., ಮಫ್ಲರ್ ಗೆ 63 ಸಾವಿರ ರೂ.!

Update: 2018-08-23 09:54 GMT

ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೆ ಆಗಸ್ಟ್ 4ರಿಂದ 10ರವರೆಗೆ ಕೈಗೊಂಡ ‘ಗೌರವ ಯಾತ್ರೆ’ಗೆ ರಾಜಸ್ಥಾನ ಬಿಜೆಪಿ ಘಟಕ ಒಂದು ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಿದೆ. ಉದಯಪುರ ವಿಭಾಗದ 23 ವಿಧಾನಸಭಾ ಕ್ಷೇತ್ರಗಳನ್ನು ಈ ಯಾತ್ರೆ ಇದುವರೆಗೆ ಸಂದರ್ಶಿಸಿದೆ.

ವಕೀಲರೊಬ್ಬರು ಆಗಸ್ಟ್ 6ರಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೇಸರಿ ಪಕ್ಷ ಈ ವಿವರಗಳನ್ನು ರಾಜಸ್ಥಾನ ಹೈಕೋರ್ಟ್‍ಗೆ ನೀಡಿದೆ.

ರಾಜೆಯವರ ಯಾತ್ರೆಗೆ ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಘಟಕಕ್ಕೆ ಆಗಸ್ಟ್ 10ರಂದು ಹೈಕೊರ್ಟ್ ನೋಟಿಸ್ ನೀಡಿತ್ತು. ಪಕ್ಷ ಇದಕ್ಕೆ ಮಾಡಿದ ವೆಚ್ಚದ ವಿವರ ಸಲ್ಲಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ಮದನ್‍ಲಾಲ್ ಸೈನಿಯವರಿಗೆ ಸೂಚಿಸಿತ್ತು.

ಗೌರವಯಾತ್ರೆಗೆ ಬಿಜೆಪಿ ರಾಜ್ಯ ಘಟಕ ಇದುವರೆಗೆ 1.10 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಬಿಜೆಪಿ ಸಲ್ಲಿಸಿದ ಅಫಿಡವಿಟ್ ಪ್ರತಿ "ಹಿಂದೂಸ್ತಾನ್ ಟೈಮ್ಸ್"ಗೆ ಲಭ್ಯವಾಗಿದೆ. 41.30 ಲಕ್ಷ ರೂಪಾಯಿಗಳನ್ನು ಟೆಂಟ್‍ ಹೌಸ್‍ಗೆ ವೆಚ್ಚ ಮಾಡಿದ್ದರೆ, 38.98 ಲಕ್ಷ ರೂಪಾಯಿ ಬ್ಯಾನರ್, ಕಟೌಟ್ ಮತ್ತಿತರ ಪ್ರಚಾರ ಸಾಮಗ್ರಿ ಸೇರಿದಂತೆ ಪ್ರಚಾರಕ್ಕೆ ಖರ್ಚಾಗಿದೆ. 25.99 ಲಕ್ಷ ರೂಪಾಯಿಗಳನ್ನು ಜಾಹೀರಾತಿಗೆ ವೆಚ್ಚ ಮಾಡಲಾಗಿದೆ.

ರಾಜೇಯವರ ಗೌರವಯಾತ್ರೆ ವೇಳೆ ಹಾಡುಗಳನ್ನು ಹಾಕಲು ಪೆನ್ ಡ್ರೈವ್ ಗಾಗಿ 16 ಸಾವಿರ ರೂ. ವೆಚ್ಚವಾಗಿದ್ದರೆ, ಹಾಡುಗಳನ್ನು ಸಂಯೋಜನೆ ಮಾಡಿದ್ದಕ್ಕಾಗಿ 3.5 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ಪಕ್ಷದ ಕಾರ್ಯಕರ್ತರು ಧರಿಸಿದ್ದ ಟೊಪ್ಪಿಗಳಿಗೆ 32,568 ರೂಪಾಯಿ ವೆಚ್ಚವಾಗಿದ್ದು, ಮಾಸ್ಕ್‍ಗಳಿಗೆ 20 ಸಾವಿರ, ಕೇಸರಿ ಮತ್ತು ಹಸಿರು ಮಫ್ಲರ್‍ಗಳಿಗೆ 63 ಸಾವಿರ ಖರ್ಚಾಗಿದೆ.

ಇದರ ಜತೆಗೆ 26 ಸಾವಿರ ರೂಪಾಯಿ ಸ್ಟಿಕ್ಕರ್ ಗಳಿಗೆ, 1.17 ಲಕ್ಷ ರೂಪಾಯಿ ಧ್ವಜಗಳಿಗೆ, 91 ಸಾವಿರ ಹ್ಯಾಂಡ್ ಕಟೌಟ್‍ಗಳಿಗೆ ಹಾಗೂ 13.38 ಲಕ್ಷ ರೂಪಾಯಿ ದೊಡ್ಡ ಕಟೌಟ್‍ಗಳಿಗೆ ವಿನಿಯೋಗವಾಗಿದೆ.

ಮುಖ್ಯಮಂತ್ರಿಯವರ ರಥ (ಬಸ್ಸು) ಬ್ರಾಂಡಿಂಗ್‍ಗೆ 1.75 ಲಕ್ಷ ರೂ. ವೆಚ್ಚವಾಗಿದೆ. ರಾಜೆ ವಾಹನದ ಟಾಪ್‍ನಿಂದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಂತೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಎಲವೇಟರ್ ಮತ್ತು ಮೇಲ್ಚಾವಣಿಯನ್ನು ಬಸ್ಸಿಗೆ ಅಳವಡಿಸಲಾಗಿತ್ತು. ಏಳು ದಿನ ಅವಧಿಯ ಯಾತ್ರೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್, ಯಾತ್ರಿಕರಿಗೆ ಆಹಾರಕ್ಕಾಗಿ 1.40 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಗಿ ಪಕ್ಷ ವಿವರಿಸಿದೆ.

ಸೈನಿಯವರ ವಕೀಲ ವಿಷ್ಣುಕಾಂತ್ ಶರ್ಮಾ ಅಫಿಡವಿಟ್ ಸಲ್ಲಿಸಿದ್ದು, ಗೌರವಯಾತ್ರೆ ಪಕ್ಷದ ಕಾರ್ಯಕ್ರಮದ ಭಾಗವಾಗಿದ್ದು, ಇದರ ಸಂಪೂರ್ಣ ವೆಚ್ಚವನ್ನು ಪಕ್ಷದ ರಾಜ್ಯ ಘಟಕವೇ ಭರಿಸಿದೆ ಹಾಗೂ ಯಾತ್ರೆಯ ವೇಳೆ ಮುಖ್ಯಮಂತ್ರಿ ತಮ್ಮ ಕರ್ತವ್ಯ ನಿಭಾಯಿಸುವುದನ್ನು ತಡೆಯಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

"ಸಾಧ್ಯವಾದಷ್ಟು ಮಟ್ಟಿಗೆ ಪುನರ್ ಬಳಕೆಗ ನಾವು ಒತ್ತು ನೀಡಿದ್ದೇವೆ. ಆದರೆ ಸಮಸ್ಯೆಯೆಂದರೆ ಬಹುತೇಕ ಕಟೌಟ್‍ಗಳನ್ನು ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನರೇ ತೆಗೆದುಕೊಂಡು ಹೋಗಿದ್ದಾರೆ. ಆದ್ದರಿಂದ ಮತ್ತೆ ಮತ್ತೆ ಅದಕ್ಕೆ ವೆಚ್ಚ ಮಾಡಬೇಕಾಯಿತು. ಕಾರ್ಡ್‍ಬೋರ್ಡ್‍ನಿಂದ ಮಾಡಿದ ಟೊಪ್ಪಿ ಮತ್ತು ಮಾಸ್ಕ್‍ಗಳು ಹಾಳಾಗಿದ್ದು, ಸಣ್ಣ ಧ್ವಜಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಷ್ಟಕರ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ವಿವರಿಸಿದರು.

ರಾಜೆ ತಮ್ಮ ಯಾತ್ರೆಯ 2ನೇ ಹಂತವನ್ನು ಆಗಸ್ಟ್ 24ರಂದು ಜೈಸಲ್ಮೇರ್‍ನಿಂದ ಆರಂಭಿಸಲಿದ್ದಾರೆ. ಈ ಯಾತ್ರೆ ಸೆಪ್ಟೆಂಬರ್ 2ರವರೆಗೆ ನಡೆಯಲಿದೆ. ಈ ಯಾತ್ರೆ 165 ಕ್ಷೇತ್ರಗಳಲ್ಲಿ ಸಂಚರಿಸಲಿದ್ದು, ಸುಮಾರು ಆರು ಸಾವಿರ ಕಿಲೋಮೀಟರ್‍ಗಳನ್ನು ಕ್ರಮಿಸಿ, ಸೆಪ್ಟೆಂಬರ್ 30ರಂದು ಅಂತ್ಯವಾಗಲಿದೆ.

Writer - ಮನೋಜ್ ಅಹುಜಾ, hindustantimes.com

contributor

Editor - ಮನೋಜ್ ಅಹುಜಾ, hindustantimes.com

contributor

Similar News