×
Ad

ಸಂತ್ರಸ್ತರ ಶಿಬಿರಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

Update: 2018-08-23 21:22 IST

ತಿರುವನಂತಪುರಂ, ಆ.23: ಕೇರಳದಲ್ಲಿ ಸುರಿದ ಮಹಾಮಳೆ ಮತ್ತು ನೆರೆಯಿಂದ ಸಂತ್ರಸ್ತರಾಗಿರುವ ರಾಜ್ಯದ ಹದಿಮೂರು ಲಕ್ಷ ಜನರು ಇದೀಗ ಸಂತ್ರಸ್ತರ ಶಿಬಿರಗಳಲ್ಲಿ ದಿನದೂಡುತ್ತಿದ್ದಾರೆ. ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಶಿಬಿರಗಳಿಗೆ ಭೇಟಿ ನೀಡಿ ಜನರು ಸಮಸ್ಯೆಗಳನ್ನು ಆಲಿಸಿದರು ಮತ್ತು ಸಹಾಯದ ಭರವಸೆ ನೀಡಿದರು.

ಚೆಂಗನ್ನೂರು, ಕೊಝೆಂಚೆರಿ, ಅಳಪುಳ, ಉತ್ತರ ಪರವೂರು ಮತ್ತು ಚಾಲಕುಡಿಯಲ್ಲಿ ನಿರ್ಮಿಸಲಾಗಿರುವ ಸಂತ್ರಸ್ತರ ಶಿಬಿರಗಳಿಗೆ ವಿಜಯನ್ ಹೆಲಿಕಾಪ್ಟರ್ ಮೂಲಕ ಭೇಟಿ ನೀಡಿದರು. ಆತಂಕ ಪಡುವ ಅಗತ್ಯವಿಲ್ಲ. ಮಹಾವಿಪತ್ತಿನಲ್ಲಿ ನೆಲಸಮವಾಗಿರುವ ಮನೆಗಳನ್ನು ಪುನರ್‌ನಿರ್ಮಿಸಲು ಸರಕಾರ ಅಗತ್ಯ ಮೊತ್ತವನ್ನು ನೀಡುವುದು ಎಂದು ಕಣ್ಣೀರಿಡುತ್ತಿದ್ದ ಸಂತ್ರಸ್ತರಿಗೆ ವಿಜಯನ್ ಸಾಂತ್ವನ ನೀಡಿದರು. ಶಿಬಿರಗಳಿಂದ ತಮ್ಮ ಮನೆಗಳಿಗೆ ವಾಪಸ್ ಆಗುತ್ತಿರುವ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಬಟ್ಟೆಗಳ ಜೊತೆಗೆ ಆಹಾರಧಾನ್ಯಗಳು, ಅಕ್ಕಿ, ಸಕ್ಕರೆ ಮತ್ತು ಬೇಳೆಗಳನ್ನು ನೀಡಲು ಸರಕಾರ ನಿರ್ಧರಿಸಿದೆ.

ನೆರೆನೀರು ಇಳಿಯುತ್ತಿದ್ದಂತೆ ಮನೆಗಳನ್ನು ಮತ್ತು ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಹಲವು ಮನೆಗಳಲ್ಲಿ ಮಣ್ಣು ಮತ್ತು ಕೆಸರಿನ ಜೊತೆಗೆ ವಿಷಪೂರಿತ ಹಾವು, ಮೊಸಳೆಗಳು ಸೇರಿಕೊಂಡಿವೆ. ಕೆಲವು ಕಡೆಗಳಲ್ಲಿ ಜನರು ಹಾವುಗಳ ಕಡಿತಕ್ಕೊಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸರಕಾರ ಎದುರಿಸುತ್ತಿರುವ ಬಹುದೊಡ್ಡ ಸವಾಲೆಂದರೆ ಮೃತ ಪ್ರಾಣಿಗಳ ಶವಗಳನ್ನು ವಿಲೇವಾರಿ ಮಾಡುವುದಾಗಿದೆ. ಪ್ರಾಣಿಗಳ ಮೃತದೇಹಗಳು ನೀರಿನಲ್ಲಿ ಎಲ್ಲೆಂದರಲ್ಲಿ ತೇಲಾಡುತ್ತಿದ್ದು ಅವುಗಳನ್ನು ಸಂಗ್ರಹಿಸಿ ಹೂಳುವ ಪ್ರಯತ್ನಗಳು ನಡೆಯುತ್ತಿವೆ. ಸರಕಾರವು ಕಳೆದ ಎರಡು ದಿನಗಳಲ್ಲಿ ಸುಮಾರು ಐದು ಸಾವಿರ ಪ್ರಾಣಿಗಳ ಮೃತದೇಹಗಳನ್ನು ವಿಲೇವಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ರಾಜ್ಯದ್ಯಾಂತ ಶುಚಿತ್ವದ ಕೆಲಸವನ್ನು ನೋಡಿಕೊಳ್ಳಲು ನಿಯಂತ್ರಣ ಕೋಣೆಗಳನ್ನು ರಚಿಸಲಾಗಿದೆ. ಶುಚಿತ್ವ ಕಾರ್ಯದ ವ್ಯವಸ್ಥಾಪನೆಯ ಹೊಣೆಯಲ್ಲಿ ಪೌರ ಸಂಸ್ಥೆಗಳಿಗೆ ನೀಡಲಾಗಿದೆ. ಸ್ವಚ್ಛಗೊಳಿಸುವ ಕಾರ್ಯದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ನಿರತರಾಗಿದ್ದಾರೆ. ಜೊತೆಗೆ ಮನೆಗಳಲ್ಲಿ ಅಗತ್ಯ ಸಹಾಯ ನೀಡಲು ಇಲೆಕ್ಟ್ರಿಶಿಯನ್‌ಗಳು ಮತ್ತು ಪ್ಲಂಬರ್‌ಗಳ ತಂಡಗಳನ್ನೂ ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News