ಕೇರಳ ಸಂತ್ರಸ್ತರಿಗೆ ನೆರವಾಗಲು ಭಾರತೀಯ ರೆಡ್ ಕ್ರಾಸ್‌ಗೆ 1.53 ಕೋಟಿ ರೂ. ನೀಡಿದ ಯೂರೋಪ್ ಒಕ್ಕೂಟ
ಹೊಸದಿಲ್ಲಿ, ಆ.23: ಕೇರಳದಲ್ಲಿ ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ನೆರವಾಗಲು ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಯೂರೋಪ್ ಒಕ್ಕೂಟ 1.53 ಕೋಟಿ ಧನ ಸಹಾಯ ನೀಡಿದೆ.
28 ಯೂರೋಪ್ ದೇಶಗಳ ಸಮೂಹವಾಗಿರುವ ಒಕ್ಕೂಟವು ಈ ಘೋಷಣೆಯನ್ನು ಗುರುವಾರ ಮಾಡಿದೆ.
ಈ ಧನ ಸಹಾಯವು ಕೇರಳದಲ್ಲಿ ಪ್ರವಾಹದಿಂದ ಅತ್ಯಂತ ಹೆಚ್ಚು ಭಾದಿತ ಪ್ರದೇಶಗಳ 25,000 ಜನರಿಗೆ ನೇರವಾಗಿ ಸಹಾಯವಾಗಲಿದೆ ಎಂದು ಒಕ್ಕೂಟ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಹಣದಿಂದ ಸಂತ್ರಸ್ತರಿಗೆ ಅಡುಗೆಕೋಣೆಯಲ್ಲಿ ಬಳಸುವ ವಸ್ತುಗಳ ಜೊತೆಗೆ ಇತರ ಹಲವು ಗೃಹೋಪಯೋಗಿ ವಸ್ತುಗಳನ್ನು ಒದಗಿಸಲಾಗುವುದು. ಪ್ರವಾಹದಿಂದ ಡೆಂಗ್, ಚಿಕನ್‌ಗುನ್ಯಾ, ಮಲೇರಿಯ ಮುಂತಾದ ಕಾಯಿಲೆಗಳು ಹರಡುವುದು ಸಾಮಾನ್ಯ. ಹಾಗಾಗಿ ಸಂತ್ರಸ್ತರಿಗೆ ಸೊಳ್ಳೆ ಪರದೆಯನ್ನೂ ನೀಡಲಾಗುವುದು. ಜೊತೆಗೆ ರೋಗ ತಡೆ ಮತ್ತು ಶುಚಿತ್ವ ಪ್ರೋತ್ಸಾಹಿಸುವ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ದೇಣಿಗೆಯು, ಅಂತರರಾಷ್ಟ್ರೀಯ ರೆಡ್ ಕ್ರಾಸ್ ಫೆಡರೇಶನ್ ಹಾಗೂ ರೆಡ್ ಕ್ರೆಸೆಂಟ್ ಸೊಸೈಟೀಸ್‌ನ ವಿಪತ್ತು ಪರಿಹಾರ ತುರ್ತು ನಿಧಿಗೆ ಯೂರೋಪ್ ಒಕ್ಕೂಟ ನೀಡುವ ಒಟ್ಟಾರೆ ಮೊತ್ತದ ಭಾಗವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.