ಉಭಯ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಆರೋಪ

Update: 2018-08-24 06:14 GMT

ಪಡುಬಿದ್ರೆ, ಆ. 24: ತಲಪಾಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ಕಂಪೆನಿ ಶಾಮೀಲಾಗಿ ಕಾನೂನು ಉಲ್ಲಂಘಿಸಿ ಶೇಕಡ 80 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಉಭಯ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.

ಗುರುವಾರ ಪಡುಬಿದ್ರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇನ್ನೂ ಕೂಡಾ 6 ಸೇತುವೆ, ಕೆಲವೆಡೆ ಹೆದ್ದಾರಿ ಕಾಮಗಾರಿಗಳು, ಸರ್ವಿಸ್ ರಸ್ತೆ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಉಲ್ಲಂಘಿಸಿ ಟೋಲ್ ಸಂಗ್ರಹಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರ ನೀಡಿದಲ್ಲಿ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹೋರಾಟ ಸಮಿತಿ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಇದರಿಂದಾಗುವ ತೊಂದರೆಗಳಿಗೆ ಜಿಲ್ಲಾಡಳಿತ ಹೊಣೆಯಾಗಬೇಕಾಗುತ್ತದೆ. ಜಿಲ್ಲಾಡಳಿತ ಹಾಗೂ ಪೊಲೀಸರು ಗುತ್ತಿಗೆದಾರರ ಪರವಾಗಿರದೆ ಜನಪರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು  ಎಚ್ಚರಿಕೆ ನೀಡಿದರು.

ನವಯುಗ ವಿರುದ್ಧ ಐಪಿಎಲ್: ಮೂಲ ವಿನ್ಯಾಸಕ್ಕೆ ವಿರುದ್ಧವಾಗಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಿರುವ ಗುತ್ತಿಗೆದಾರ ನವಯುಗ ಕಂಪೆನಿ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಅಪೂರ್ಣ ಕಾಮಗಾರಿಯಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ಅಪಘಾತ ನಡೆದರೂ ಮೊದಲಾಗಿ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ಎಚ್ಚರಿಸಿದರು.

ಈಗಾಗಲೇ ಹೆದ್ದಾರಿಯ ಅಪೂರ್ಣ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ನಡೆದು ನೂರಾರು ಮಂದಿ ಜೀವ ಕಳೆದು, ಕುಟುಂಬಗಳು ಬೀದಿಪಾಲಾಗಿವೆ. ಹಲವಾರು ಮಂದಿ ಅಂಗವೈಕಲ್ಯ ಹೊಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಕಳೆದ 2 ವರ್ಷಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 8 ಬಾರಿ ಸಭೆ ನಡೆದರೂ ಕೇವಲ ಟೋಲ್ ವಿನಾಯಿತಿ ಮಾತ್ರ ದೊರಕಿದೆ. ಉಳಿದ ಯಾವುದೇ ಬೇಡಿಕೆಗಳಿಗೆ ಪರಿಹಾರ ದೊರಕಿಲ್ಲ ಎಂದರು.

60 ಕಿಮೀಗಳಿಗೆ ಒಂದು ಟೋಲ್ ಇರಬೇಕೆಂಬ ಕಾನೂನಿದ್ದರೂ, ತಲಪಾಡಿಯಿಂದ ಸಾಸ್ತಾನದವರೆಗಿನ 120 ಕೀಮಿ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಟೋಲ್‌ಗಳು ಕಾರ್ಯಾಚರಿಸುತ್ತಿವೆ. ಸುರತ್ಕಲ್ ಟೋಲ್ ಹೆಜಮಾಡಿ ಟೋಲ್‌ನೊಂದಿಗೆ ವಿಲೀನ ಮಾಡಲಾಗುತ್ತದೆ ಎಂದು ಹೇಳಿದ್ದರೂ ಇನ್ನೂ ಆಗಿಲ್ಲ. ಈಗಾಗಲೇ ಸುರತ್ಕಲ್ ಟೋಲ್ ಇನ್ನೊಬ್ಬರಿಗೆ ಟೆಂಡರ್ ಆಗಿದೆ. ಶಾಸಕರು, ಸಂಸದರು ಸಹಿತ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರು.

ಹೋರಾಟ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ಸಾಸ್ತಾನ, ಚಿತ್ತರಂಜನ್ ಭಂಡಾರಿ ಸುರತ್ಕಲ್, ದಿವಾಕರ ಶೆಟ್ಟಿ ಕಾಪು, ಮಧು ಆಚಾರ್ಯ, ತಾಪಂ ಸದಸ್ಯರಾದ ಮೈಕೆಲ್ ರಮೇಶ್ ಡಿಸೋಜಾ, ಯು.ಸಿ. ಶೇಖಬ್ಬ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗುಲಾಂ ಮೊಹಮ್ಮದ್, ಅಬ್ದುಲ್ ಅಜೀಜ್, ಲೋಕೇಶ್ ಕಂಚಿನಡ್ಕ, ಸುಧೀರ್ ಕರ್ಕೇರ, ಮಿಥುನ್ ಹೆಗ್ಡೆ, , ಪಾಂಡುರಂಗ ಕರ್ಕೇರ ಉಪಸ್ಥಿತರಿದ್ದರು.

ಸೆ. 20ರಂದು ಪ್ರತಿಭಟನೆ

ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವೇ ಅವಿಭಜಿತ ಜಿಲ್ಲೆಯ ನಾಲ್ಕು ಟೋಲ್‌ಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸೆಪ್ಟಂಬರ್ 20ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಏಕಕಾಲದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲು ಗುರುವಾರ ಪಡುಬಿದ್ರೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿ ಸಂಚಾಲಕ ಶೇಖರ್ ಹೆಜಮಾಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News