ಉಡುಪಿ ನಗರಸಭಾ ಚುನಾವಣೆ: ಕಾಂಗ್ರೆಸ್ ಗೆಲುವು

Update: 2018-08-24 16:10 GMT

ಉಡುಪಿ, ಆ. 24: ಮುಂದಿನ ವಾರ ನಡೆಯುವ ಉಡುಪಿ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ನಗರಸಭೆಯಲ್ಲಿ ಮತ್ತೆ ಅಧಿಕಾರ ನಡೆಸಲಿದೆ ಎಂಬ ವಿಶ್ವಾಸವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ವ್ಯಕ್ತಪಡಿಸಿದ್ದಾರೆ.

 ಉಡುಪಿ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ಮನೆ ಮನೆಗೆ ಭೇಟಿ ನೀಡಿ, ವಿವಿದೆಡೆ ಪಕ್ಷದ ವಾರ್ಡ್ ಸಮಿತಿಗಳ ಸಭೆಯನ್ನು ಉದ್ದೇಶಿಸಿ ಜಯಮಾಲ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯ ಸೋಲು ತಾತ್ಕಾಲಿಕವಾಗಿದ್ದು, ಉಡುಪಿ ನಗರದ ಅಭೂತಪೂರ್ವ ಅಭಿವೃದ್ಧಿಗೆ ಕಾರಣಕರ್ತರಾದ ಪ್ರಮೋದ್ ಮಧ್ವರಾಜ್ ಹಾಗೂ ವಿನಯ ಕುಮಾರ್ ಸೊರಕೆ ಅವರ ಸೋಲಿನ ಬಗ್ಗೆ ಉಡುಪಿಯ ಜನತೆಗೆ ಈಗ ಪಶ್ಚಾತ್ತಾಪವಾಗಿದೆ. ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಂಬ ಇರಾದೆ ಜನತೆಯ ಮನಸ್ಸಿನಲ್ಲಿ ಮೂಡಿದೆ ಎಂದು ಸಚಿವೆ ಜಯಮಾಲ ನುಡಿದರು.

ರಾಜ್ಯದ ಸಮ್ಮಿಶ್ರ ಸರಕಾರವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರಕಾರದ ಎಲ್ಲಾ ಜನಪರ ಯೋಜನೆಗಳನ್ನು ಮುಂದುವರಿ ಸಿಕೊಂಡು ಹೋಗುತ್ತಿದೆ. ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಹಿತ ಕಾಪಾಡಲು ಮುಂದಾಗಿದೆ ಎಂದು ಸಚಿವೆ ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್, ವಿವಿಧ ವಾರ್ಡ್‌ಗಳ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News