ಪಳ್ಳಿಯ ಬೃಹತ್ ಶಿಲಾಯುಗ ನಿವೇಶನದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ

Update: 2018-08-24 16:14 GMT

ಶಿರ್ವ, ಆ.24: ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಅಭಿಯಾನದ ಅಂಗವಾಗಿ ಪಳ್ಳಿಯ ಬೃಹತ್ ಶಿಲಾಯುಗ ಕಾಲದ ಸಮಾಧಿ ನೆಲೆಯಲ್ಲಿ ಒಂದು ದಿನದ ಶ್ರಮದಾನ-ಪ್ರಾತ್ಯಕ್ಷಿಕೆ ಮತ್ತು ಅಧ್ಯಯನ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಳ್ಳಿಯ ಜಗದೀಶ್ ಹೆಗ್ಡೆ, ಸಾವಿರಾರು ವರ್ಷಗಳ ಪ್ರಾಚೀನತೆಯನ್ನು ಹೊಂದಿದ ಇಂತಹ ಸ್ಮಾರಕವನ್ನು ರಕ್ಷಿಸಿ ಕಾಪಾಡುವುದು ಮತ್ತು ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ತತ್‌ಕ್ಷಣವೇ ನಿಲ್ಲಿಸಿ, ಇದನ್ನೊಂದು ಚಾರಿತ್ರಿಕ ಪ್ರವಾಸಿ ತಾಣವನ್ನಾಗಿ ಮಾಡಲು ಸರಕಾರ ಮತ್ತು ಜನಪ್ರತಿನಿಧಿಗಳು ಕೂಡಲೇ ಕಾರ್ಯಪ್ರವರ್ತರಾಗಬೇಕೆಂದು ಆಗ್ರಹಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾಲೇಜಿನ ಸಹಪ್ರಾಧ್ಯಾಪಕ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಪ್ರೊ. ಟಿ. ಮುರುಗೇಶಿ ಮಾತನಾಡಿ, ನಮ್ಮ ಚರಿತ್ರೆ ಮತ್ತು ಸಂಸ್ಕೃತಿಯ ಬೇರುಗಳಾಗಿರುವ ಇಂತಹ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವುದರ ಜೊತೆಗೆ ಅವುಗಳನ್ನು ನಮ್ಮ ಯುವಜನಕ್ಕೆ ಪರಿಚಯಿಸುವ, ಅವುಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಮಂಜುನಾಥ್ ಕೆ.ಜಿ. ಮಾತನಾಡಿ, ಕೊಡಗು ಮತ್ತು ಕೇರಳದ ಪ್ರಾಕೃತಿಕ ವಿಕೋಪಗಳು ಮಾನವ ದುರಾಸೆಯ ಫಲವಾಗಿದ್ದು, ಪ್ರಕೃತಿ ಮತ್ತು ಪರಂಪರೆಯ ಮಹತ್ವ ಮಾತ್ರ ಈ ಸಮಸ್ಯೆಗಳಿಗೆ ಉತ್ತರವಾಗಿದೆ. ಯುವ ಜನರು ಎಚ್ಚೆತ್ತುಕೊಳ್ಳಲು ಪ್ರಕೃತಿಯ ಮಡಿಲಿನಲ್ಲಿಯೇ ನಡೆಯುವ ಇಂತಹ ಅಧ್ಯಯನ ಕಾರ್ಯಕ್ರಮಗಳು ಮಹತ್ವದ ಹೆಜ್ಜೆಯಾಗಿವೆ ಎಂದರು.

ವಿದ್ಯಾರ್ಥಿನಿ ಸಿಂಧು ಸ್ವಾಗತಿಸಿದರು. ಅಧ್ಯಯನಕ್ಕೆ ಸಹಕರಿಸಿದ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಾಗಭೂಷಣ್ ಮತ್ತು ಕೋಡು ಧೀರಜ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ನಂತರ, ಬೃಹತ್ ಶಿಲಾಯುಗ ಕಾಲದ ಸಮಾಧಿ ಸ್ಮಾರಕದ ಸುತ್ತ ಬೆಳೆದಿದ್ದ ಕಳೆಯನ್ನು ಕಿತ್ತು ವಿದ್ಯಾರ್ಥಿಗಳು ಸ್ಮಾರಕವನ್ನು ಸ್ವಚ್ಚಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News