ಉಡುಪಿ: ಸಮಾರಂಭಗಳಲ್ಲಿ ಉಳಿದ ಊಟ ಹಸಿದವರಿಗೆ ತಲುಪಿಸುವ ಸರ್ವಧರ್ಮಗಳ ಯುವಕರ ಪಡೆ

Update: 2018-08-24 16:27 GMT

ಉಡುಪಿ, ಆ.24: ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಉಳಿದ ಊಟವನ್ನು ಹಸಿದವರಿಗೆ ತಲುಪಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಸರ್ವ ಧರ್ಮೀಯರನ್ನೊಳಗೊಂಡ ಯುವಕರ ಪಡೆಯೊಂದು ರಚನೆಯಾಗಿದೆ.

ಈಗಾಗಲೇ ಚಾಲ್ತಿಯಲ್ಲಿರುವ ‘ಉಡುಪಿ ಹೆಲ್ಪ್‌ಲೈನ್’ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಮೂಳೂರಿನ ಫಹಾದ್, ಹೂಡೆಯ ಮಹೇಶ್ ಪೂಜಾರಿ, ಕಲ್ಯಾಣಪುರದ ರಫೀಕ್ ಸೇರಿದಂತೆ ಹಲವು ಮಂದಿ ಸಮಾಲೋಚನೆ ನಡೆಸಿ ಈ ಮೂಲಕ ಸಮಾಜ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

‘ನಿಮ್ಮ ಯಾವುದೇ ಸಮಾರಂಭಗಳಲ್ಲಿ ಊಟ ಉಳಿದರೆ ಎಸೆಯಬೇಡಿ. ನಮಗೆ ಕರೆ ಮಾಡಿ. ಹಸಿದವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು’ ಎಂಬ ಬರಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಮದುವೆ ಹಾಲ್, ಅಡುಗೆಯವರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದೀಗ ಬಹಳ ಉತ್ಸಾಹದಲ್ಲಿರುವ ಯುವಕರ ತಂಡ ಅದಕ್ಕೆ ಬೇಕಾದ ಎಲ್ಲ ತಯಾರಿಯಲ್ಲಿ ತೊಡಗಿಸಿಕೊಂಡಿದೆ.

ಈ ತಂಡವು ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಊಟ ಉಳಿದಿರುವ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಬಂದರೆ ತಕ್ಷಣ ಅಲ್ಲಿಗೆ ವಾಹನದೊಂದಿಗೆ ತೆರಳಿ, ಶುದ್ಧ ಊಟವನ್ನು ಜಿಲ್ಲೆಯ ವಿವಿಧ ವಿಶೇಷ ಮಕ್ಕಳ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವ ಕೆಲಸ ಮಾಡುತ್ತದೆ. ಇದಕ್ಕಾಗಿ ಈ ತಂಡ ಈಗಾಗಲೇ ಶಿರ್ವ, ಉಡುಪಿ ನಗರ, ಕಲ್ಯಾಣಪುರ ಸೇರಿದಂತೆ ಹಲವು ಕಡೆಗಳಲ್ಲಿರುವ ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಿದೆ.

‘ಹಾಲ್‌ಗಳಿಂದ ಊಟ ತೆಗೆದುಕೊಂಡು ಬರಬೇಕಾದರೆ ಪಾತ್ರೆಗಳ ಅವಶ್ಯ ಕತೆ ಇದ್ದು, ಅದಕ್ಕೆ ನಮ್ಮದೆ ವಾಟ್ಸಾಪ್ ಗ್ರೂಪಿನ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಸುಮಾರು 150 ಪಾತ್ರೆಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಊಟವನ್ನು ಸಾಗಿಸಲು ಬಾಡಿಗೆ ವಾಹನವನ್ನು ಗೊತ್ತು ಮಾಡಲಾಗುತ್ತದೆ. ಇದಕ್ಕೆ ನಾವೇ ಹಣ ಒಟ್ಟು ಮಾಡಿ ನೀಡುತ್ತೇವೆ’ ಎಂದು ಮಹೇಶ್ ಪೂಜಾರಿ ಹೂಡೆ ಪತ್ರಿಕೆಗೆ ತಿಳಿಸಿದ್ದಾರೆ.

‘ಕೊಡಗು ಹಾಗೂ ಕೇರಳ ನೆರೆ ಸಂತ್ರಸ್ತರ ದಯನೀಯ ಪರಿಸ್ಥಿತಿ ನೋಡಿ, ಸಮಾರಂಭಗಳಲ್ಲಿ ಎಸೆಯುವ ಊಟವನ್ನು ವೇಸ್ಟ್ ಮಾಡದೆ ನಮ್ಮಲ್ಲಿರುವ ಸಾಕಷ್ಟು ಮಂದಿ ಹಸಿದವರಿಗೆ ತಲುಪಿಸುವ ಚಿಂತನೆ ಮಾಡಿದ್ದೇವೆ. ಇದಕ್ಕೆ ವಿಶೇಷ ಶಾಲೆ, ಆಶ್ರಮಗಳಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಉಡುಪಿಯ ಹಲವು ಹಾಲ್‌ನವರು ಕೂಡ ನಮ್ಮನ್ನು ಸಂಪರ್ಕಿಸಿದ್ದಾರೆ’ ಎಂದು ರಫೀಕ್ ಕಲ್ಯಾಣಪುರ ತಿಳಿಸಿದ್ದಾರೆ.

ಈ ಸಮಾಜ ಕಾರ್ಯದಲ್ಲಿ ಸುಮಾರು 40 ಮಂದಿ ಕೈಜೋಡಿಸಿದ್ದು, ನಾಲ್ಕೈದು ಮಂದಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಾರಂಭಗಳಲ್ಲಿ ಊಟ ಉಳಿದರೆ ಮಹೇಶ್ ಪೂಜಾರಿ ಹೂಡೆ(ಮೊ-8861250241), ರಫೀಕ್ ಕಲ್ಯಾಣಪುರ(9844614828), ಧನುಷ್ ಶೆಟ್ಟಿ ಹೊಳೆಬಾಗಿಲು ಮಂದರ್ತಿ (7337633284), ಕೀರ್ತಿ ಖಾರ್ವಿ ಬೆಂಗ್ರೆ (8970495058) ಅವರನ್ನು ಸಂಪರ್ಕಿಸಬಹುದಾಗಿದೆ.

‘ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ ಯುವಕರ ತಂಡ ಸೇರಿ ಈ ಸಮಾಜ ಸೇವೆ ಕಾರ್ಯಕ್ಕೆ ಮುಂದಾಗಿದ್ದೇವೆ. ನಮಗೆ ಜಾತಿ, ಧರ್ಮ ಮುಖ್ಯ ಅಲ್ಲ. ಹಸಿದವರಿಗೆ ಅನ್ನ ನೀಡುವ ಸಮಾಜ ಸೇವೆಯೇ ನಮ್ಮ ಮುಖ್ಯ ಧ್ಯೇಯ ವಾಗಿದೆ. ಎಲ್ಲ ಧರ್ಮದವರೊಂದಿಗೆ ಜೊತೆಗೂಡಿ ನಾವು ಮುಂದೆ ಸಾಗುವ ಸಂಕಲ್ಪ ಮಾಡಿದ್ದೇವೆ’

-ಮಹೇಶ್ ಪೂಜಾರಿ ಹೂಡೆ, ಸಮಾಜ ಸೇವಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News