ನಿರಾಶ್ರಿತರ ಶಿಬಿರದಲ್ಲಿ ಹೃದಯಾಘಾತದಿಂದ ಜೋಡುಪಾಲ ಸಂತ್ರಸ್ತ ಮೃತ್ಯು

Update: 2018-08-25 07:14 GMT
ಅಂಗಾರ ಮೋಗೇರಿ

ಸುಳ್ಯ, ಆ.25: ಮಡಿಕೇರಿ ತಾಲೂಕಿನ ಜೋಡುಪಾಲದಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನಿರಾಶ್ರಿತರಾದವರಿಗೆ ಸುಳ್ಯ ತಾಲೂಕಿನ ತೆಕ್ಕಿಲ್ ಸಮುದಾಯ ಭವನದಲ್ಲಿ ತೆರೆದಿರುವ ನಿರಾಶ್ರಿತರ ಶಿಬಿರದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಜೋಡುಪಾಲ ನಿವಾಸಿ ಅಂಗಾರ ಮೋಗೇರಿ(60) ಮೃತಪಟ್ಟ ವ್ಯಕ್ತಿ. ಅವರು ಎರಡು ತಿಂಗಳಿನಿಂದ ಹೃದಯ ಚಿಕಿತ್ಸೆಗೆ ಒಳಗಾಗಿದ್ದು ತಡರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವಾಹ ಹಾಗೂ ಭೂಕುಸಿತದಿಂದ ಅಂಗಾರ ಕುಟುಂಬವು ಮನೆ, ಜಮೀನು ಕಳೆದುಕೊಂಡಿದೆ. ಆರಂಭದಲ್ಲಿ ಅಂಗಾರ, ಅವರ ಪತ್ನಿ ಮುತ್ತಕ, ಹಿರಿಯ ಪುತ್ರ ಲಕ್ಷ್ಮಣ್, ಲಕ್ಷಣ್ ಅವರ ಪತ್ನಿ ಸರಿತಾ, ಮಗ ಮೋಹಿತ್, ದೊಡ್ಡಮ್ಮ ಜಾನಕಿ ಎಂಬವರು ಮಡಿಕೇರಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ಅಲ್ಲದೆ ಅಂಗಾರ ಅವರ ಕಿರಿಯ ಪುತ್ರ ಜನಾರ್ದನ, ಅವರ ಉಮಾವತಿ ಸುಳ್ಯದ ತೆಕ್ಕಿಲ್ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಮಡಿಕೇರಿಯಲ್ಲಿ ವಿಪರೀತ ಚಳಿ ಇರುವುದರಿಂದ ಮಡಿಕೇರಿ ಶಿಬಿರದಲ್ಲಿದ್ದ ಅಂಗಾರ ಸಹಿತ ಆರು ಮಂದಿ ಮೂರು ದಿನಗಳ ಹಿಂದೆ ತೆಕ್ಕಿಲ್ ನಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಬಂದಿದ್ದರು ಎನ್ನಲಾಗಿದೆ.

ಪ್ರವಾಹ ಮತ್ತು ಭೂಕುಸಿತದಿಂದ ಮನೆ, ಜಮೀನು ಕಳೆದುಕೊಂಡಿದ್ದರಿಂದ ಅಂಗಾರ ತೀವ್ರ ಮನನೊಂದಿದ್ದರು. ರಾತ್ರಿ ಸುಮಾರು ಒಂದು ಗಂಟೆ ಸುಮಾರಿಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರು ಕೊನೆಯುಸಿರೆಳೆದರು ಎಂದು ಅವರ ಹಿರಿಯ ಪುತ್ರ ಲಕ್ಷಣ್ ತಿಳಿಸಿದ್ದಾರೆ.


ಶಿಬಿರಕ್ಕೆ ನೋಂದಣಿ ಮಾಡದ ಅಧಿಕಾರಿಗಳು: ಕುಟುಂಬಸ್ಥರ ಆರೋಪ

ಪ್ರವಾಹ ಮತ್ತು ೂ ಕುಸಿತದಿಂದ ನಾವು ಮನೆ, ಜಮೀನನ್ನು ಕಳೆದುಕೊಂಡಿದ್ದೇವೆ. ನಮ್ಮ ಊರಿಗೆ ಯಾವ ಭಾಗದಿಂದಲೂ ಹೋಗಲು ಅಸಾಧ್ಯವಾಗಿದೆ. ಎಲ್ಲ ರಸ್ತೆ, ದಾರಿಗಳು ಮುಚ್ಚಿ ಹೋಗಿವೆ. ಆದರೂ ನಮ್ಮನ್ನು ಸುಳ್ಯ ನಿರಾಶ್ರಿತರ ಶಿಬಿರದಲ್ಲಿ ನೋಂದಣಿ ಮಾಡಿ ಪಾಸ್ ಕೊಡಲು ಅಲ್ಲಿನ ಅಧಿಕಾರಿಗಳು ಒಪ್ಪುತ್ತಿಲ್ಲ. ಮೊದಲು ನಾವು ಮಡಿಕೇರಿ ಶಿಬಿರದಲ್ಲಿ ಇದ್ದೆವು. ಅಲ್ಲಿ ವಿಪರೀತ ಚಳಿ ಇರುವುದರಿಂದ ಮತ್ತು ತಂದೆಯ ಅಸೌಖ್ಯದಿಂದ ಸುಳ್ಯ ಶಿಬಿರಕ್ಕೆ ಮೂರು ದಿನಗಳ ಹಿಂದೆ ಬಂದಿದ್ದೆವು. ಆದರೆ ಇಲ್ಲಿನ ಅಧಿಕಾರಿಗಳು ನಮ್ಮನ್ನು ಶಿಬಿರದಲ್ಲಿ ನೋಂದಣಿ ಮಾಡಿ ಪಾಸ್ ಕೊಡಲು ತಕರಾರು ಮಾಡುತ್ತಿದ್ದಾರೆ. ಮಡಿಕೇರಿಯಿಂದ ಬರೆಸಿ ತನ್ನಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರ ಬಳಿ ಹೇಳಿದಾಗ ನೋಂದಣಿ ಮಾಡುವುದು ಬೇಡ. ಆದರೆ ಇಲ್ಲೇ ಉಳಿದುಕೊಳ್ಳಿ ಎಂದು ಹೇಳಿದ್ದಾರೆ. ಪ್ರವಾಹ ಬಂದಾಗ ಮಂಗಳೂರಿನಲ್ಲಿದ್ದ ನನ್ನ ತಮ್ಮ ಜನಾರ್ದನ ಶಿಬಿರಕ್ಕೆ ಬಂದು ಆರು ದಿನಗಳಾದರೂ ಇನ್ನೂ ಇಲ್ಲಿ ಅಧಿಕಾರಿಗಳು ನೋಂದಣಿ ಮಾಡಿ ಪಾಸ್ ನೀಡಿಲ್ಲ. ಮೊದಲೇ ಮನೆ, ಜಮೀನು ಕಳೆದುಕೊಂಡು ತೀವ್ರ ನೊಂದಿದ್ದ ತಂದೆ ಇದರಿಂದ ಮತ್ತಷ್ಟು ನೊಂದಿದ್ದರು. ರಾತ್ರಿ ತೀವ್ರ ಎದೆನೋವಿನಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಮೃತಪಟ್ಟ ಅಂಗಾರ ಅವರ ಹಿರಿಯ ಪುತ್ರ ಲಕ್ಷಣ್ ಆರೋಪಿಸಿದ್ದಾರೆ. 


ಅಂಗಾರ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ: ಆರೋಪ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬಂತೆ ನೆರೆ ನಿರಾಶ್ರಿತರಿಗೆ ಸರಕಾರ ಎಲ್ಲ ಸವಲತ್ತು ಕಲ್ಪಿಸುತ್ತಿದೆ. ಆದರೆ ಅಧಿಕಾರಿಗಳು ಅದನ್ನು ಜನರಿಗೆ ತಲುಪಿಸುತ್ತಿಲ್ಲ. ಮಡಿಕೇರಿ ನಿರಾಶ್ರಿತರ ಶಿಬಿರದಿಂದ ಸುಳ್ಯ ಶಿಬಿರಕ್ಕೆ ಬಂದ ಅಂಗಾರ ಕುಟುಂಬವನ್ನು ಇಲ್ಲಿನ ಅಧಿಕಾರಿಗಳು ಇನ್ನೂ ನೋಂದಣಿ ಮಾಡಿಲ್ಲ. ಇದರಿಂದ ತೀವ್ರ ಮನನೊಂದು ಅಂಗಾರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಸರಕಾರ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.

- ಶಂಸುದ್ದೀನ್, ಜೋಡುಪಾಲ ನಿವಾಸಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News