ಸೆಪ್ಟಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

Update: 2018-08-25 07:55 GMT

ಮಂಗಳೂರು, ಆ.25: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ಬಳಿಕ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರದ ನಿಗಮ ಮಂಡಳಿ ಸೇರಿದಂತೆ ವಿಧಾನಸಭಾ ಮಂತ್ರಿಮಂಡಲದ ಸಂಪುಟವನ್ನು ವಿಸ್ತರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರಿಗೆ ರಾಜ್ಯ ಸರಕಾರವು ಸೂಕ್ತ ಸ್ಥಾನಮಾನವನ್ನು ಕಲ್ಪಿಸಿದೆ. ಮುಂದಿನ ವಿಧಾನಸಭೆ ಚುನಾವಣೆ ಬರುವವರೆಗೂ ಮುಖ್ಯಮಂತ್ರಿಯ ಸ್ಥಾನವನ್ನು ಬದಲಾಯಿಸುವುದಿಲ್ಲ. ಐದು ವರ್ಷ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕಾರ್ಯ ರಾಜ್ಯಭಾರ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೇಂದ್ರದ ಬಿಜೆಪಿ ಸರಕಾರ ದೇಶವನನ್ನು ಗಂಡಾಂತರ ಪರಿಸ್ಥಿತಿಗೆ ತಳ್ಳಿದೆ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ, ವಿದೇಶದಿಂದ ಹಣ ತರುವುದು, ರೈತರಿಗೆ ಬೆಂಬಲ ಬೆಲೆ, ಸ್ತ್ರೀಯರಿಗೆ ರಕ್ಷಣೆ, ಭದ್ರತೆ, ಭಯೋತ್ಪಾದನೆಯನ್ನು ತಡೆಗಟ್ಟುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿಪರ ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಾಲ್ಕೂವರೆ ವರ್ಷಗಳ ಆಡಳಿತದ ರಿಪೋರ್ಟ್ ಕಾರ್ಡನ್ನು ನೋಡಿದರೆ ಈ ಸರಕಾರ ಸಂಪೂರ್ಣ ವಿಫಲವಾಗಿರುವುದು ತಿಳಿದುಬರುತ್ತದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲೂ ಸೋತಿದೆ. ದೇಶದಲ್ಲಿ ಹಿಂದುತ್ವದ ಮೂಲಕ, ಜನರ ಭಾವನೆಗಳೊಂದಿಗೆ ಆಟವಾಡುತ್ತಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.

ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಎಂಪಿಗಳು ನೆರೆ ಪರಿಹಾರ, ಮಹದಾಯಿ, ಕಾವೇರಿ, ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ವಿಚಾರದಲ್ಲಿ ಸುಮ್ಮನಿರುತ್ತಾರೆ. ಯಾವುದರ ವಿರುದ್ಧವೂ ಧ್ವನಿಯೆತ್ತುವುದಿಲ್ಲ. ಇದರಿಂದ ಬಿಜೆಪಿಯ ಮುಖವಾಡದ ರಾಜಕಾರಣ ದೇಶದ ಜನತೆಗೆ ಅರಿವಾಗಿದೆ.

 ಬಿಜೆಪಿ ನೇತೃತ್ವದ ಸರಕಾರದಲ್ಲಿಯೇ ಜಮ್ಮು ಮತ್ತು ಕಾಶ್ಮೀರ ರಾಜ್ಯ ಉಗ್ರಗಾಮಿಗಳ ತಾಣವಾಗಿ ಮಾರ್ಪಟ್ಟಿದೆ. ಇವರಿಂದ ಸಾವಿರಾರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಕೇಂದ್ರ ಸರಕಾರ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ. ಬಿಜೆಪಿಯ ಸೋಲು-ಆಡಳಿತದ ವಿಫಲವಾಗಿರುವ ಬಗ್ಗೆ ದೇಶಕ್ಕೆ ಮಾಹಿತಿ ನೀಡಲಾಗುವುದು ಎಂದರು.

ದೇಶದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಹಿಂಸಾತ್ಮಕ ಕೃತ್ಯಗಳು ಹೆಚ್ಚುತ್ತಿವೆ. ಉನ್ನಾವೋ, ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳ ಪರವಾಗಿ ಬಿಜೆಪಿಯ ಶಾಸಕರು ಪಾದಯಾತ್ರೆ ಮಾಡಿದರು. ಈ ಮೂಲಕ ಆರೋಪಿಗಳ ರಕ್ಷಣೆಗಾಗಿ ಬಿಜೆಪಿ ಮುಂದಾಯಿತು. ದೇಶದಲ್ಲಿ ಸ್ತ್ರೀಯರಿಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂದರು.

ಅಲ್ಪಸಂಖ್ಯಾತರು, ದಲಿತರು ಇಂದು ಕೇಂದ್ರ ಸರಕಾರ ಹಾಗೂ ಬಿಜೆಪಿಯ ವಿರುದ್ಧ ಮಾತನಾಡುವಂತಿಲ್ಲ. ಮಾತನಾಡಿದರೆ ಅಂತಹವರಿಗೆ ಹಲ್ಲೆ ಮಾಡಲಾಗುತ್ತಿದೆ. ಪ್ರೊ.ಕೆ.ಎಸ್. ಭಗವಾನ್, ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಶ್ರೀ ವಿರುದ್ಧ ಬಲಪಂಥೀಯರಿಂದ ಹಲವಾರು ಬೆದರಿಕೆಗಳು ಬರುತ್ತಿವೆ. ಈ ಮೂಲಕ ಉಗ್ರಪಂಥ ಪ್ರಾರಂಭವಾಗಿದೆ ಎಂದು ದಿನೇಶ್ ಗುಂಡೂರಾವ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್‌ಕುಮಾರ್ ಮತ್ತಿತರರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News