ಯುವ ಪೀಳಿಗೆಗೆ ಬದ್ರುದ್ದೀನ್ ಮಾದರಿ: ದಿನೇಶ್ ಗುಂಡೂರಾವ್

Update: 2018-08-25 08:32 GMT

ಮಂಗಳೂರು, ಆ.25: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬೆಳೆಸಿದ ಮುಹಮ್ಮದ್ ಬದ್ರುದ್ದೀನ್ ಅವರ ತಾಳ್ಮೆ, ಪರಿಶ್ರಮ, ಕಾರ್ಯವೈಖರಿ, ನಿಷ್ಠೆ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ಬಲ್ಮಠದ ಶಾಂತಿ ನಿಲಯದಲ್ಲಿಂದು ನಡೆದ ಮುಹಮ್ಮದ್ ಬದ್ರುದ್ದೀನ್ ನೆನೆಪು- ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯುವ ಪೀಳಿಗೆ ರಾಜಕಾರಣಕ್ಕೆ ಬಂದ ತಕ್ಷಣವೇ ಟಿಕೆಟ್, ಸ್ಥಾನಮಾನ ಅಧಿಕಾರ ಬೇಕೆಂದು ಪಟ್ಟುಹಿಡಿಯುವ ಮನೋಭಾವ ಹೆಚ್ಚುತ್ತಿದೆ. ಇಂದಿನ ಜೀವನ ಫಾಸ್ಟ್‌ಫುಡ್‌ನಂತೆ ಮಾರ್ಪಟ್ಟಿದೆ. ಕಾರ್ಯಕರ್ತರು ಪಕ್ಷದ ಸೈದ್ಧಾಂತಕ ನಿಲುವು, ಉದ್ದೇಶ, ಕೊಡುಗೆಯನ್ನು ಅರಿತುಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮುಹಮ್ಮದ್ ಬದ್ರುದ್ದೀನ್ 40 ವರ್ಷಗಳಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರು. ಆದರೆ ಅವರು ಯಾವುದೇ ಸ್ಥಾನಮಾನವನ್ನು ಬಯಸಲಿಲ್ಲ. ಅಂತಹ ನಾಯಕರ ಅಗತ್ಯ ಪಕ್ಷಕ್ಕೆ ಇದೆ. ಅಧಿಕಾರಕ್ಕಾಗಿಯೇ ಬಂದರೆ ಕೆಲವು ಸಾರಿ ನಿರಾಶೆಯೂ ಆಗಬಹುದು. ನಿಸ್ವಾರ್ಥ ಸೇವೆ ಇಂದಿನ ಅಗತ್ಯವಾಗಿದೆ ಎಂದರು.

ಬಿ.ಎಂ.ಇದಿನಬ್ಬ, ಯು.ಟಿ.ಫರೀದ್, ಬಿ.ಎ.ಮೊಹಿದೀನ್, ಹಮೀದ್ ಕಂದಕ್, ಯು.ಎಚ್.ಹಮೀದ್ ಆದರ್ಶ ರಾಜಕಾರಣಿಗಳಾಗಿದ್ದರು. ಇಂತಹ ರಾಜಕಾರಣ ಯುವಪೀಳಿಗೆಗೆ ಮಾರ್ಗದರ್ಶಿಯಾಗಿದೆ. ಇಂತಹ ಆದರ್ಶ ರಾಜಕಾರಣಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ತಯಾರಿಸುತ್ತಿದೆ ಎಂದು ತಿಳಿಸಿದರು.

ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಮಾತನಾಡಿ, ಪಕ್ಷದ ಆಪದ್ಭ್ಬಾಂಧವನಾಗಿ ಸದಾ ಸಲಹೆ ನೀಡುವ ಮನಸುಳ್ಳವರಾಗಿದ್ದರು ಬದ್ರುದ್ದೀನ್. 1982ರಿಂದಲೂ ಬದ್ರುದ್ದೀನ್ ತನ್ನ ಸ್ನೇಹಿತರಾಗಿದ್ದರು. ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅವರೋರ್ವ ಅಪೂರ್ವ ರಾಜಕಾರಣಯಾಗಿದ್ದರು ಎಂದು ಸ್ಮರಿಸಿದರು.

ರಾಜ್ಯದಲ್ಲಿ ಕೋಮುವಾದಿ ಸರಕಾರ ಅಧಿಕಾರಕ್ಕೆ ಬಾರದಿರಲೆಂದು ಸಮ್ಮಿಶ್ರ ಸರಕಾರ ರಚಿಸಲಾಗಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದ್ದು, ಕೇಂದ್ರದಲ್ಲಿ ಮತ್ತೆ ನಾವು ಅಧಿಕಾರಕ್ಕೇರಲಿದ್ದೇವೆ. ರಾಹುಲ್‌ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಎನ್‌ಎಸ್‌ಯುಐ ಖ್ಯಾತಿಯ ಮುಹಮ್ಮದ್ ಬದ್ರುದ್ದೀನ್ ಕಾಂಗ್ರೆಸ್ ಪಕ್ಷಕದ ಬಗ್ಗರ, ಸಭೆಗಳನ್ನು ನಡೆಸುವುದರ ಬಗ್ಗೆ ಸದಾ ಜಾಗೃತರಾಗಿರುತ್ತಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಪಕ್ಷದ ವಿಚಾರದಲ್ಲಿ ಸಂಘಟನೆ ಮಾಡುವುದರಲ್ಲಿ ಅದ್ವೀತಿಯರು ಎಂದರು.

ಈ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್‌ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು.

 ಪ್ರಶಸ್ತಿ ಪ್ರದಾನ
ಕಾಂಗ್ರೆಸ್ ಪಕ್ಷದಲ್ಲಿ ಉತ್ತಮವಾಗಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ ಕಾರ್ಕಳ ಶೇಕ್ ಮುಹಮ್ಮದ್ ಮಸೂದ್ ಹಾಗೂ ಪ್ರಭಾಕರ್ ಶ್ರೀಯಾನ್ ಅವರಿಗೆ ‘ಸೇವಾ ಸಾಧಕ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುಷ್ಪಾವತಿ, ಇಸ್ಮಾಯೀಲ್ ಜೆಪ್ಪಿನಮೊಗರು, ಮನಮೋಹನ್ ಕಲ್ಲಾಪು, ಮುಹಮ್ಮದ್ ಗುಲಾಬ್ ಜಬ್ಬಾರ್ ಅವರಿಗೆ ‘ಸೇವಾ ಪುರಸ್ಕಾರ’ ನೀಡಲಾಯಿತು.
ಸಂಕಪ್ಪ ದೇರೇಬೈಲ್ ಕುಟುಂಬದ ಸುನಂದಾ, ಕೆ.ಯಾಕೂಬ್ ಕುಟುಂಬದ ಶಾಕೀರ್, ಲೀಲಾಕರ್ ದೇವಾಡಿಗ ಕುಟುಂಬದ ವೀಣಾ ಎನ್., ಸತೀಶ್ ಕೊಡಿಯಾಲ್‌ಬೈಲ್ ಕುಟುಂಬದ ಸದಸ್ಯರಿಗೆ ಮರಣೋತ್ತರ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದ.ಕ. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ಶಾಂತಲಾ ಗಟ್ಟಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಮಾಣಪತ್ರ ವಿತರಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್‌ಕುಮಾರ್, ಐವನ್ ಡಿಸೋಜ, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಅಶ್ವನಿ ಕುಮಾರ್, ಮಾಜಿ ಶಾಸಕರಾದ ಬಿ.ಎ. ಮೊಯ್ದಿನ್ ಬಾವ, ವಿನಯ ಕುಮಾರ್ ಸೊರಕೆ, ವಿಜಯ ಕುಮಾರ್ ಶೆಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಮುಹಮ್ಮದ್ ಬದ್ರುದ್ದೀನ್ ಅವರ ಪತ್ನಿ ಪ್ರೀಡಾ ಮುಹಮ್ಮದ್, ಪುತ್ರಿ ಸುಜಾನಾ, ಮೇಯರ್ ಕೆ.ಭಾಸ್ಕರ್ ಮೊಯ್ಲಿ, ಶಶಿಧರ್ ಹೆಗಡೆ, ಪಿ.ವಿ.ಮೋಹನ್, ಎಂ.ಎ.ಗಫೂರ್, ಕೃಪಾ ಆಳ್ವ, ಜಿ.ಎ.ಬಾವ, ಸತ್ಯನ್, ಮಿಥುನ್ ರೈ, ಶಾಲೆಟ್ ಪಿಂಟೊ, ಮಮತಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ರಘುರಾಮ್ ರಾಜ್ ಪ್ರಾರ್ಥಿಸಿದರು. ಅಬ್ದುಲ್ ಸಲಿಂ ಸ್ವಾಗತಿಸಿದರು. ಧನೀಶ್ ಡಿಸಿಲ್ವಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News