ಮಹಿಳೆಯರನ್ನು ಚುಂಬಿಸಿ ‘ರೋಗ ಗುಣಪಡಿಸುತ್ತೇನೆ’ ಎನ್ನುತ್ತಿದ್ದ ‘ಕಿಸ್ಸಿಂಗ್ ಬಾಬಾ’ನ ಬಂಧನ

Update: 2018-08-25 15:04 GMT

ಗುವಾಹಟಿ,ಆ.25: ಮಹಿಳೆಯರನ್ನು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಪಾರು ಮಾಡುವ ನೆಪದಲ್ಲಿ ಅವರನ್ನು ತಬ್ಬಿಕೊಂಡು ಚುಂಬಿಸುತ್ತಿದ್ದ ಸ್ವಘೋಷಿತ ದೇವಮಾನವ,ರಾಮ ಪ್ರಕಾಶ ಚೌಹಾಣ್ ಅಲಿಯಾಸ್ ‘ಕಿಸ್ಸಿಂಗ್ ಬಾಬಾ’ನನ್ನು ಅಸ್ಸಾಮಿನ ಮೋರಿಗಾಂವ ಜಿಲ್ಲೆಯ ಭೋರಲ್ತುಪ್ ಗ್ರಾಮದಲ್ಲಿ ಪೊಲೀಸರು ಬಂಧಿಸಿ ಕಂಬಿಗಳ ಹಿಂದೆ ತಳ್ಳಿದ್ದಾರೆ.

ತನ್ನ ‘ಚಮತ್ಕಾರಿ ಚುಂಬನ’ದಿಂದ ಮಹಿಳೆಯರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಮುಕ್ತಿ ನೀಡುವುದಾಗಿ ಹೇಳಿಕೊಳ್ಳುತ್ತಿದ್ದ ಈ ಢೋಂಗಿ ಬಾಬಾ ತನಗೆ ಶ್ರೀವಿಷ್ಣುವಿನಿಂದ ಈ ಅತೀಂದ್ರಿಯ ಶಕ್ತಿ ಲಭಿಸಿದೆ ಎಂದು ರೈಲು ಬಿಡುತ್ತಿದ್ದ. ತನ್ನ ಮನೆಯಲ್ಲಿಯೇ ದೇವಸ್ಥಾನವೊಂದನ್ನು ನಿರ್ಮಿಸಿಕೊಂಡಿದ್ದ ಈತ ಅಲ್ಲಿ ಮಹಿಳೆಯರಿಗೆ ‘ಚಿಕಿತ್ಸೆ’ ನೀಡುತ್ತಿದ್ದ. ತಿಂಗಳ ಹಿಂದೆ ಈತ ಈ ‘ಚಿಕಿತ್ಸೆ’ಯನ್ನು ಆರಂಭಿಸಿದ್ದು,ಮೂಢನಂಬಿಕೆಗಳನ್ನು ಹೊಂದಿರುವ ಗ್ರಾಮೀಣ ಮಹಿಳೆಯರ ಶೋಷಣೆಯ ಸಂಚು ಇದಾಗಿತ್ತು ಎನ್ನಲಾಗಿದೆ.

ನಿರಕ್ಷರಿಗಳೇ ಹೆಚ್ಚಾಗಿರುವ ಮೋರಿಗಾಂವ ಶತಮಾನಗಳಿಂದಲೂ ವಾಮಾಚಾರವನ್ನು ನಂಬಿಕೊಂಡು ಬಂದಿದ್ದು,ಈ ಹಿನ್ನೆಲೆಯಲ್ಲಿ ಈ ಬಾಬಾ ಗ್ರಾಮದಲ್ಲಿ ಸಾಕಷ್ಟು ಹೆಸರನ್ನೂ ಮಾಡಿದ್ದ. ತನ್ನ ಮಗನ ‘ಚಿಕಿತ್ಸಾ ಶಕ್ತಿ’ಯ ಬಗ್ಗೆ ಈತನ ತಾಯಿ ಕೂಡ ವದಂತಿಗಳನ್ನು ಹಬ್ಬಿಸಿದ್ದು,ಪೊಲೀಸರೀಗ ಆಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News