ನಕಲಿ ಎಟಿಎಂ ಕಾರ್ಡ್ ಬಳಸಿ 78 ಕೋ.ರೂ. ಎಗರಿಸಿದ ಹ್ಯಾಕರ್ ‌ಗಳು

Update: 2018-08-25 15:22 GMT

ಪುಣೆ, ಆ.25: ಎಟಿಎಂ ಕಾರ್ಡ್‌ಗಳ ಪಾಸ್‌ವರ್ಡ್ ಪಡೆದು ಹಣ ಲಪಟಾಯಿಸುವ ವಂಚಕರ ಬಗ್ಗೆ ತಿಳಿದಿದೆ. ಆದರೆ ಈಗ ಎಟಿಎಂ ಕಾರ್ಡ್‌ಗಳನ್ನೇ ನಕಲಿ ಮಾಡಿ ಮರುಸೃಷ್ಟಿಸಿ ಬ್ಯಾಂಕ್‌ಗಳಿಂದ ಹಣ ಲಪಟಾಯಿಸುವ ಕರಾಮತ್ತು ತೋರಿದ್ದಾರೆ ಹ್ಯಾಕರ್‌ಗಳು.

ಪುಣೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಾಸ್ಮೋಸ್ ಬ್ಯಾಂಕ್‌ನ ಸರ್ವರ್‌ಗಳನ್ನು ಹ್ಯಾಕ್ ಮಾಡಿ ತದ್ರೂಪದ ಎಟಿಎಂ ಕಾರ್ಡ್ ತಯಾರಿಸಿ, ಆ ಕಾರ್ಡ್ ಮೂಲಕ 28 ದೇಶಗಳಲ್ಲಿ 78 ಕೋಟಿ ರೂ.ಗಳನ್ನು ಎಗರಿಸಲಾಗಿದೆ. ಆಗಸ್ಟ್ 11 ಮತ್ತು 13ರಂದು ಕಾಸ್ಮೋಸ್ ಬ್ಯಾಂಕ್‌ನ ಎಟಿಎಂ ಸ್ವಿಚ್ ಸರ್ವರ್ ಹ್ಯಾಕ್ ಮಾಡಿದ ಅಪರಿಚಿತ ವ್ಯಕ್ತಿಗಳು ‘ವೀಸಾ’ ಹಾಗೂ ‘ರುಪೇ’ ಎಟಿಎಂ ಕಾರ್ಡ್‌ಗಳ ಮಾಹಿತಿಯನ್ನು ಕದ್ದಿದ್ದಾರೆ. ಅಲ್ಲದೆ ಅಂತರ್‌ಬ್ಯಾಂಕ್ ವ್ಯವಹಾರಕ್ಕೆ ಬಳಸುವ ‘ಸ್ವಿಫ್ಟ್’ ವ್ಯವಸ್ಥೆಯ ಮೇಲೂ ದಾಳಿ ನಡೆಸಿದ್ದು ಒಟ್ಟು 94 ಕೋಟಿ ರೂ. ಲಪಟಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಿಟನ್, ಅಮೆರಿಕ, ರಶ್ಯ, ಯುಎಇ, ಕೆನಡಾ ಸೇರಿದಂತೆ 28 ರಾಷ್ಟ್ರಗಳಲ್ಲಿ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸಲಾಗಿದೆ . ವಂಚಕರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಈ ದೇಶಗಳ ಕಾನೂನು ಅನುಷ್ಠಾನ ಏಜೆನ್ಸಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಡಿಸಿಪಿ(ಸೈಬರ್ ಮತ್ತು ಆರ್ಥಿಕ ಅಪರಾಧಗಳ ವಿಭಾಗ) ಜ್ಯೋತಿಪ್ರಿಯಾ ಸಿಂಗ್ ತಿಳಿಸಿದ್ದಾರೆ. ಬ್ಯಾಂಕ್‌ನ ಕಂಪ್ಯೂಟರ್ ವ್ಯವಸ್ಥೆಯ ‘ಅಧ್ಯಯನ’ ನಡೆಸಿ ಹ್ಯಾಕರ್‌ಗಳು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ.

ಹ್ಯಾಕರ್‌ಗಳ ದಾಳಿಗೂ ಮುನ್ನ ಬ್ಯಾಂಕ್‌ಗೆ ಯಾವುದಾದರೊಂದು ಎಚ್ಚರಿಕೆಯ ಸಂದೇಶ ಬಂದಿರಬಹುದು. ಬ್ಯಾಂಕ್‌ಗಳ ಭದ್ರತಾ ವ್ಯವಸ್ಥೆಯ ವರದಿಗಾಗಿ ಕಾಯುತ್ತಿದ್ದೇವೆ. ವಿದೇಶದಲ್ಲಿ ಎಟಿಎಂ ಕಾರ್ಡ್ ಬಳಸಿ ಹಣ ಪಡೆದವರನ್ನು ಕಂಡು ಹಿಡಿಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ಕಾಸ್ಮೋಸ್ ಬ್ಯಾಂಕ್‌ನ ನೈಜ ಎಟಿಎಂ ಕಾರ್ಡ್ ಬಳಸಿ ಹಣ ಪಡೆದ ಗ್ರಾಹಕರಿಗೆ ಹೆಚ್ಚುವರಿ ಹಣ ದೊರಕಿದ್ದು, ಇಂತಹ ಗ್ರಾಹಕರಿಂದ ಸುಮಾರು 4 ಲಕ್ಷ ರೂ. ಹಣ ಮರಳಿ ಪಡೆಯಲಾಗಿದೆ. ಬ್ಯಾಂಕ್‌ನ ಕಂಪ್ಯೂಟರ್‌ನಲ್ಲಿ ಹ್ಯಾಕರ್‌ಗಳು ಅಳವಡಿಸಿದ್ದ ಅಕ್ರಮ ಸಾಫ್ಟ್‌ವೇರ್ ಸಕ್ರಿಯವಾಗಿದ್ದ ಸಂದರ್ಭದಲ್ಲಿ ಬ್ಯಾಂಕಿನ ಎಟಿಎಂನಿಂದ ಹಣ ಹಿಂಪಡೆದ ಗ್ರಾಹಕರಿಗೆ ಅವರು ಬಯಸಿದ್ದಕ್ಕಿಂತ ಹೆಚ್ಚುವರಿ ಹಣ ದೊರೆತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News