×
Ad

ಖಫ್ಝ್ ಅನ್ನು ಮಹಿಳಾ ಗುಪ್ತಾಂಗ ಛೇದನದಂತೆ ಪರಿಗಣಿಸುವಂತಿಲ್ಲ: ಡಿಬಿಡಬ್ಲ್ಯುಆರ್‌ಎಫ್

Update: 2018-08-25 21:54 IST

ಮುಂಬೈ, ಆ. 25: ತಮ್ಮ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿರುವ ಮಹಿಳಾ ಸುನ್ನತಿ (ಖಫ್ಝ್) ಆಚರಣೆಯನ್ನು ಸಮರ್ಥಿಸಿಕೊಂಡಿರುವ ದಾವೂದಿ ಬೊಹ್ರಾ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆ, ಇದು ನಿಷೇದ ಹೇರಬೇಕಾದ ಮಹಿಳಾ ಗುಪ್ತಾಂಗ ಛೇದನವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ.

ಮಹಿಳಾ ಗುಪ್ತಾಂಗ ಛೇದನದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಪರಿಗಣಿಸಿರುವುದನ್ನು ರದ್ದುಗೊಳಿಸಿ ಆಸ್ಟ್ರೇಲಿಯಾದ ಸೌತ್ ವೇಲ್ಸ್‌ನ ಅಪರಾಧ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಘಟನೆ ಶನಿವಾರ ಈ ಹೇಳಿಕೆ ನೀಡಿದೆ. ಸಾಂಪ್ರದಾಯಿಕ ದಾವೂದಿ ಬೊಹ್ರಾ ಆಚರಣೆಯಾದ ಖಫ್ಝ್ (ಮಹಿಳಾ ಸುನ್ನತಿ)ವನ್ನು ಮಹಿಳಾ ಗುಪ್ತಾಂಗ ಛೇದನದಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಗುಜರಾತ್‌ನ ಮೂಲದವರಾದ ದಾವೂದಿ ಬೊಹ್ರಾ ಸಮುದಾಯ ಶಿಯಾ ವ್ಯಾಪಾರಿಗಳ ಉಪ ಪಂಗಡವಾಗಿದೆ. ಇವರು ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ. ಖಫ್ಝ್ ಶತಮಾನಗಳಿಂದ ಅನುಸರಿಸಿಕೊಂಡುಬರುತ್ತಿರುವ ಅಪಾಯರಹಿತ ಧಾರ್ಮಿಕ ಆಚರಣೆ ಎಂದು ದಾವೂದಿ ಬೊಹ್ರಾ ವುಮೆನ್ಸ್ ಅಸೋಶಿಯೇಷನ್ ಫಾರ್ ರಿಲೀಜಿಯಸ್ ಫ್ರೀಡಂ (ಡಿಬಿಡಬ್ಲ್ಯುಆರ್‌ಎಫ್) ಹೇಳಿದೆ. ಮಹಿಳಾ ಗುಪ್ತಾಂಗ ಛೇದನ ಸಮರ್ಥನೀಯವಲ್ಲ. ಅದನ್ನು ನಿಷೇಧಿಸಬೇಕು ಎಂದೂ ಕೂಡ ಸಂಘಟನೆ ತಿಳಿಸಿದೆ.

‘‘ಖಫ್ಝ್ ಶತಮಾನಗಳಿಂದ ಅನುಸರಿಸಿಕೊಂಡು ಬರುತ್ತಿರುವ ಅಪಾಯಕಾರಿ ಧಾರ್ಮಿಕ ಆಚರಣೆ. ಈ ಚಾರಿತ್ರಿಕ ತೀರ್ಪನ್ನು ಜಗತ್ತಿನಾದ್ಯಂತದ ದಾವೂದಿ ಬೊಹ್ರಾಗಳು ಸ್ವಾಗತಿಸಲಿದ್ದಾರೆ.’’ ಎಂದು ಡಿಬಿಡಬ್ಲುಆರ್‌ಎಫ್ ಕಾರ್ಯದರ್ಶಿ ಹಾಗೂ ವಕ್ತಾರೆ ಸಮೀನಾ ಕಂಚ್ವಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News