ಹಿಂಸೆಗೆ ತಿರುಗಿದ ಬಾಲಕಿ ಮೇಲೆ ಅತ್ಯಾಚಾರದ ವಿರುದ್ಧ ಪ್ರತಿಭಟನೆ,10 ಪೊಲೀಸರಿಗೆ ಗಾಯ

Update: 2018-08-25 16:42 GMT

ಹೊಸದಿಲ್ಲಿ,ಆ.25: ದಿಲ್ಲಿಯ ವಸಂತ ಕುಂಜ್ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಅತ್ಯಾಚಾರವನ್ನು ವಿರೋಧಿಸಿ ಶುಕ್ರವಾರ ರಾತ್ರಿ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿದ್ದು,ಪ್ರತಿಭಟನಾಕಾರರು ಕಾರುಗಳಿಗೆ ಹಾನಿಯನ್ನುಂಟು ಮಾಡಿ ಪೊಲೀಸರತ್ತ ಕಲ್ಲುತೂರಾಟ ನಡೆಸಿದ್ದರಿಂದ 10 ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

11ರ ಹರೆಯದ ಬಾಲಕಿಯ ಮೇಲಿನ ಅತ್ಯಾಚಾರದ ವಿರುದ್ಧ ಪ್ರತಿಭಟಿಸಲು ರಂಗಪುರಿ ಪಹಾಡಿ ಪ್ರದೇಶದ ಜನರು ಗುಂಪು ಸೇರಿದ್ದು,ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದ್ದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅತ್ಯಾಚಾರ ಆರೋಪಿಯನ್ನು ಬಂಧಿಸಲಾಗಿದೆಯೆಂದು ತಿಳಿಸಿದರೂ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದರು ಎಂದು ಡಿಸಿಪಿ ದೇವೇಂದ್ರ ಆರ್ಯ ಸುದ್ದಿಗಾರರಿಗೆ ತಿಳಿಸಿದರು.

ಜನರನ್ನು ಚದುರಿಸಲು ಪೊಲೀಸರು ಸೌಮ್ಯ ಬಲವನ್ನು ಪ್ರಯೋಗಿಸುವುದು ಅನಿವಾರ್ಯವಾಗಿತ್ತು ಎಂದ ಅವರು ಇಬ್ಬರು ಎಸಿಪಿಗಳು,ಇಬ್ಬರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 10 ಪೊಲೀಸರು ಗಾಯಗೊಂಡಿದ್ದಾರೆ. 11 ಖಾಸಗಿ ಕಾರುಗಳು ಮತ್ತು ಒಂದು ಪೊಲೀಸ್ ವಾಹನ ಹಾನಿಗೊಂಡಿವೆ. ಘಟನೆಗೆ ಸಂಬಂಧಿಸಿದಂತೆ 20 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಆ.11ರಂದು ಅತ್ಯಾಚಾರದ ಘಟನೆ ನಡೆದಿದ್ದು,ಪ್ರಕಾಶ(34) ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News