ಡೋಕಾಲಾದಲ್ಲಿ ಹೆಚ್ಚು ಯೋಧರನ್ನು ನಿಯೋಜಿಸಲು ಭೂತಾನ್‌ಗೆ ಉತ್ತೇಜನ ನೀಡಿ: ಕೇಂದ್ರ ಸರಕಾರಕ್ಕೆ ಸಂಸದೀಯ ಸಮಿತಿ ಸೂಚನೆ

Update: 2018-08-25 18:01 GMT

ಹೊಸದಿಲ್ಲಿ, ಆ. 25: ಉತ್ತರ ಭಾಗದ ಅತಿಸೂಕ್ಷ್ಮ ವಲಯಗಳಲ್ಲಿ ಹೆಚ್ಚು ಯೋಧರನ್ನು ನಿಯೋಜಿಸುವಂತೆ ಭೂತಾನ್ ಅನ್ನು ಭಾರತ ಉತ್ತೇಜಿಸಬೇಕು ಎಂದು ಶಿಫಾರಸು ಮಾಡುವ ಡೋಕಾಲ ಬಿಕ್ಕಟ್ಟಿನ ಕುರಿತ ವರದಿಯನ್ನು ಸಂಸದೀಯ ಸಮಿತಿ ಶನಿವಾರ ಅಂಗೀಕರಿಸಿತು.

ಮೂರು ದೇಶಗಳ ಗಡಿ ಸೇರುವ ವಿವಾದಿತ ಸ್ಥಳದ ಭಾರತದ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ಸೇನೆ ತಡೆ ಒಡ್ಡಿದ ಬಳಿಕ ಕಳೆದ ವರ್ಷ ಜೂನ್ 16ರಿಂದ ಸಿಕ್ಕಿಂ ವಲಯದ ಡೋಕಾಲಾದಲ್ಲಿ ಭಾರತ ಹಾಗೂ ಚೀನ ಸೇನೆ ನಡುವೆ 73 ದಿನಗಳ ಕಾಲ ಬಿಕ್ಕಟ್ಟು ಉಂಟಾಗಿತ್ತು. ಡೋಕಾಲ ಕುರಿತು ಭೂತಾನ ಹಾಗೂ ಚೀನಾ ನಡುವೆ ವಿವಾದ ಇದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರು. ಶನಿವಾರ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿರಲಿಲ್ಲ.

ಈ ತಿಂಗಳ ಆರಂಭದಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಹೆಚ್ಚಿನ ಸದಸ್ಯರು ಗೈರು ಹಾಜರಾಗಿ ಕೋರಂ ಇಲ್ಲದ ಹಿನ್ನೆಲೆಯಲ್ಲಿ ಈ ಕರಡು ವರದಿಯನ್ನು ಅಂಗೀಕರಿಸಿರಲಿಲ್ಲ. ಇಂದು ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ಕೆಲವು ಸದಸ್ಯರು, ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ವರದಿ ಅಂಗೀಕರಿಸ ಬಹುದು ಎಂದು ಹೇಳಿದರು. ಆಗಸ್ಟ್ 6ರಂದು ಈ ಕರಡು ವರದಿಯನ್ನು ಸಮಿತಿಯ ಸದಸ್ಯರಿಗೆ ನೀಡಲಾಗಿತ್ತು. ಆದರೆ, ಸಮಿತಿ ಆ ವಲಯದಲ್ಲಿ ಭಾರತದ ಪಡೆ ನಿಯೋಜನೆ ಹೆಚ್ಚಿಸುವುದರ ಪರವಾಗಿ ಇದೆಯೋ ಇಲ್ಲವೋ ಎಂಬುದ ಸ್ಪಷ್ಟವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News