ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಅರ್ಜಿ

Update: 2018-08-25 18:09 GMT

ಪಾಟ್ನ, ಆ.25: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಘನತೆಗೆ ಕುಂದುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ವಕೀಲರೊಬ್ಬರು, ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ಕೋರಿ ಬಿಹಾರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಝಫರ್‌ಪುರದ ಪ್ರಧಾನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಕೀಲ ಸುಧೀರ್ ಕುಮಾರ್ ಓಝ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಸೆ.4ರಂದು ನಡೆಯಲಿದೆ. ಜರ್ಮನಿ ಮತ್ತು ಬ್ರಿಟನ್‌ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಭಯೋತ್ಪಾದನೆಯನ್ನು ಸಮರ್ಥಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿರುವ ನಿರುದ್ಯೋಗದ ಸಮಸ್ಯೆ ಐಸಿಸ್‌ನಂತಹ ಸಂಘಟನೆ ಬೆಳೆಯಲು ಕಾರಣವಾಗಬಹುದು ಎಂದು ಹೇಳಿಕೆ ನೀಡಿ ದೇಶಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೆ ಮಹಿಳೆಯರ ವಿರುದ್ಧದ ಹಿಂಸೆ ಹೆಚ್ಚಾಗಲು ಭಾರತೀಯ ಸಂಸ್ಕೃತಿ ಕಾರಣ ಎಂದು ಹೇಳುವ ಮೂಲಕ ಭಾರತದ ಪ್ರತಿಷ್ಠೆಗೆ ಮಸಿ ಬಳೆದಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

 ಭಾರತದಲ್ಲಿ ಆತಂಕದ ಪರಿಸ್ಥಿತಿ ನೆಲೆಸಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಖಂಡಿಸಿ ಭಾರತದಲ್ಲಿ ವಿವಿಧೆಡೆ ಪ್ರತಿಭಟನೆ ನಡೆದಿದೆ ಎಂದು ಹೇಳಿರುವ ಅರ್ಜಿದಾರರು, ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ರಾಹುಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ. ಒಂದು ವೇಳೆ ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದರೆ ಕನಿಷ್ಟ ಎರಡರಿಂದ ಮೂರು ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News