ಪರಿಸರ ಸೂಕ್ಷ್ಮಪಶ್ಚಿಮ ಘಟ್ಟಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ಹವಾಮಾನ ತಜ್ಞರ ಕರೆ

Update: 2018-08-26 16:33 GMT

 ಕೊಚ್ಚಿ,ಆ.26: ಕೇರಳದಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡು ಸಾವಿರಾರು ಜನರನ್ನು ನಿರ್ವಸಿತರನ್ನಾಗಿಸಿರುವ ಇತ್ತೀಚಿನ ಭಾರೀ ಮಳೆ ಮತ್ತು ನೆರೆಗೆ ಹವಾಮಾನ ಬದಲಾವಣೆ ಕಾರಣವಾಗಿತ್ತು ಎಂದು ದಿಲ್ಲಿಯ ವಿಜ್ಞಾನ ಮತ್ತು ವಾತಾವರಣ ಕೇಂದ್ರ(ಸಿಎಸ್‌ಇ)ದ ಉಪ ಮಹಾ ನಿರ್ದೇಶಕ ಚಂದ್ರ ಭೂಷಣ್ ಅವರು ರವಿವಾರ ಹೇಳಿದರು.

 ಪದೇಪದೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಮತ್ತು ಅದರಿಂದಾಗಿ ದಿಢೀರ್ ಪ್ರವಾಹಗಳು ಉಂಟಾಗುತ್ತಿರುವುದನ್ನ್ನು ಗಣನೆಗೆ ತೆಗೆದುಕೊಂಡು ದೇಶದಲ್ಲಿಯ ಜಲಾಶಯ ನಿರ್ವಹಣೆ ವ್ಯವಸ್ಥೆಯ ಮರು ಮೌಲ್ಯಮಾಪನವನ್ನು ನಡೆಸಬೇಕಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಅವರು,ಕೇರಳದಲ್ಲಿ ನೆರೆ ಪ್ರಕೋಪಕ್ಕೆ ಹವಾಮಾನ ಬದಲಾವಣೆ ಕಾರಣವಾಗಿತ್ತು ಮತ್ತು ನಿರ್ದಿಷ್ಟವಾಗಿ ಕೇರಳದಲ್ಲಿಯ ಪಶ್ಚಿಮ ಘಟ್ಟಗಳು ಮತ್ತು ಇತರ ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ಕೆಟ್ಟ ಅಭಿವೃದ್ಧಿ ಪದ್ಧತಿಗಳಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದರು.

ಉತ್ತರಾಖಂಡ,ಜಮ್ಮು-ಕಾಶ್ಮೀರ ಮತ್ತು ಚೆನ್ನೈ ಸೇರಿದಂತೆ ಈ ಶತಮಾನದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅತಿಯಾದ ಮಳೆ ಸುರಿದ ಘಟನೆಗಳು ಮತ್ತು ತತ್ಸಂಬಂಧಿ ದಿಢೀರ್ ನೆರೆಗಳಿಗೆ ಹವಾಮಾನ ಬದಲಾವಣೆ ಕಾರಣವಾಗಿತ್ತು ಎಂದ ಅವರು,ತಾಪಮಾನ ಹೆಚ್ಚುತ್ತಿರುವುದನ್ನು ಮತ್ತು ಅತಿಯಾದ ಮಳೆ ಸುರಿಯುವ ಘಟನೆಗಳು ಪುನರಾವರ್ತನೆಯಾಗುವ ಸ್ಪಷ್ಟ ಸಂಕೇತವನ್ನು ಗಣನೆಗೆ ತೆಗೆದುಕೊಂಡು ನಮ್ಮ ಜಲಾಶಯ ನಿರ್ವಹಣೆ ಪದ್ಧತಿಗಳನ್ನು ಮರು ಮೌಲ್ಯಮಾಪನಗೊಳಿಸಬೇಕಿದೆ ಎಂದರು.

ವಿಪರೀತ ಹವಾಮಾನ ಬದಲಾವಣೆ ಸಂಬಂಧಿತ ಘಟನೆಗಳಿಂದ ಜನರ ಜೀವಗಳನ್ನು ರಕ್ಷಿಸಲು ಉತ್ತಮ ಮುನ್ಸೂಚನೆ ವ್ಯವಸ್ಥೆ ಮತ್ತು ಉತ್ತಮ ಎಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ಪ್ರತಿಪಾದಿಸಿದ ಅವರು,ಪಶ್ಚಿಮ ಘಟ್ಟಗಳ ವಿನಾಶವು ಕೇರಳದಲ್ಲಿ ವ್ಯಾಪಕ ಪರಿಣಾಮಗಳನ್ನು ಬೀರಿದೆ ಎಂದರು.

ಪಶ್ಚಿಮ ಘಟ್ಟಗಳ ಕುರಿತ ಮಾಧವ ಗಾಡ್ಗೀಳ್ ಅಥವಾ ಕಸ್ತೂರಿರಂಗನ್ ಸಮಿತಿಗಳ ವರದಿಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದರು.

ಭಾರೀಪ್ರಮಾಣದ ಅರಣ್ಯನಾಶ,ಗಣಿಗಾರಿಕೆ ಮತ್ತು ನಿರ್ಮಣ ಚಟುವಟಿಕೆಗಳು ಕೇರಳದ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿವೆ. ಇಂತಹ ಹಾನಿಕಾರಕ ಚಟುವಟಿಕೆಗಳು ಕೇರಳದಲ್ಲಿ ವಿಪತ್ತು ಹಾನಿಯ ತೀವ್ರತೆಯನ್ನು ಹೆಚ್ಚಿಸುತ್ತವೆ ಎಂದ ಅವರು,ನೆರೆ ಹೇಗಿದ್ದರೂ ಬರುತ್ತಿತ್ತು. ಆದರೆ ಕೇರಳದಲ್ಲಿ ಪಶ್ಚಿಮ ಘಟ್ಟಗಳ ಮತ್ತು ಇತರ ಪರಿಸರ ಸೂಕ್ಷ್ಮ ಪ್ರದೇಶಗಳ ನಾಶವು ನೆರೆಯ ಪರಿಣಾಮವನ್ನು ತೀವ್ರಗೊಳಿಸಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News