2010ರಿಂದೀಚಿಗೆ ಗರಿಷ್ಠ ಮಟ್ಟಕ್ಕೇರಿದ ಉಗ್ರವಾದ ಅಪ್ಪಿಕೊಳ್ಳುತ್ತಿರುವ ಕಾಶ್ಮೀರಿ ಯುವಕರ ಸಂಖ್ಯೆ

Update: 2018-08-26 16:46 GMT

ಶ್ರೀನಗರ,ಆ.25: ಜಮ್ಮು-ಕಾಶ್ಮೀರದ ಉಗ್ರವಾದ ಕ್ಷೇತ್ರದಲ್ಲಿ ಅಪಾಯಕಾರಿ ಪ್ರವೃತ್ತಿಗಳು ಕಂಡುಬರತೊಡಗಿವೆ. ಈ ವರ್ಷವೊಂದರಲ್ಲೇ ಸುಮಾರು 131 ಕಾಶ್ಮೀರಿ ಯುವಕರು ವಿವಿಧ ಭಯೋತ್ಪಾದಕ ಗುಂಪುಗಳನ್ನು ಸೇರಿದ್ದು, 2010ರಿಂದೀಚೆಗೆ ಇದು ಗರಿಷ್ಠ ಸಂಖ್ಯೆಯಾಗಿದೆ. ಈ ಪೈಕಿ ಹೆಚ್ಚಿನ ಗುಂಪುಗಳು ಅಲ್-ಖೈದಾ ಸಿದ್ಧಾಂತವನ್ನು ಹೊಂದಿರುವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿವೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದರು.

ಈ ವರ್ಷ ಈವರೆಗೆ ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಿಂದ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ(35) ಯುವಕರು ಉಗ್ರವಾದವನ್ನು ಅಪ್ಪಿಕೊಂಡಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಉಗ್ರರ ಗುಂಪುಗಳಿಗೆ ಸೇರಿದವರ ಸಂಖ್ಯೆ 126 ಆಗಿತ್ತು. ಅಲ್-ಖೈದಾದ ಬೆಂಬಲವಿದೆಯೆಂದು ಹೇಳಿಕೊಳ್ಳುತ್ತಿರುವ,ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದ ಗ್ರಾಮದ ನಿವಾಸಿ ಝಾಕಿರ್ ರಶೀದ್ ಭಟ್ ಅಲಿಯಾಸ್ ಝಾಕಿರ್ ಮೂಸಾ ಎಂಬಾತನ ನೇತೃತ್ವದ ಅನ್ಸಾರ್ ಘಝ್ವತುಲ್ ಹಿಂದ್ ಗುಂಪಿಗೆ ಹೆಚ್ಚಿನ ಯುವಕರು ಸೇರುತ್ತಿದ್ದಾರೆಂದು ಅಧಿಕಾರಿಗಳು ಹೇಳಿದರು.

ಮೂಸಾ ಹುರಿಯತ್ ಕಾನ್ಫರೆನ್ಸ್‌ನ ಪ್ರತ್ಯೇಕತಾವಾದಿ ನಾಯಕರ 27 ವರ್ಷಗಳ ಪ್ರದರ್ಶನಕ್ಕೆ ಅಂತ್ಯ ಹಾಡಿದ ಮತ್ತು “ಅವರು ಕಾಶ್ಮೀರವನ್ನು ರಾಜಕೀಯ ಸಮಸ್ಯೆ ಎಂದು ಬಣ್ಣಿಸಿದರೆ ಅವರ ತಲೆ ಕಡಿಯುವುದಾಗಿ” ಬೆದರಿಕೆಯೊಡ್ಡಿದ ಏಕೈಕ ಉಗ್ರನಾಗಿ ಹೊರಹೊಮ್ಮಿರುವುದರಿಂದ ಆತನ ಗುಂಪಿಗೆ ಬೆಂಬಲ ಕ್ರಮೇಣ ಹೆಚ್ಚುತ್ತಿದೆ.

ಇಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧದಲ್ಲಿಯೇ ತೊರೆದಿರುವ 24 ಹರೆಯದ ಮೂಸಾ 2016ಲ್ಲಿ ಬುರ್ಹಾನ್ ವಾನಿಯ ಹತ್ಯೆ ಬಳಿಕ ಯುವಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.

 ಮೂಸಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ, ಕ್ರೀಡೆಯಲ್ಲಿಯೂ ಮುಂದಿದ್ದ. ಆತ ಅಂತರರಾಜ್ಯ ಕೇರಂ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಎಂದು ಸ್ಮರಿಸಿಕೊಂಡ ಹಿರಿಯ ಪೊಲಿಸ್ ಅಧಿಕಾರಿಯೋರ್ವರು,ಆತ ಕಣಿವೆಯಲ್ಲಿನ ಹಲವಾರು ಯುವಕರ ಪಾಲಿಗೆ ಹೀರೋ ಆಗಿ ಹೊರಹೊಮ್ಮಲು ಇದು ಕಾರಣವಾಗಿದೆ ಎಂದರು.

2011ರಲ್ಲಿ ಅಫಘಾನಿಸ್ತಾನದಲ್ಲಿ ಮಿತ್ರಪಡೆಗಳ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದ ಯೆಮೆನಿ-ಅಮೆರಿಕನ್ ಬೋಧಕ ಅನ್ವರ್ ಅಲ್-ಅವ್ಲಾಕಿಯಿಂದ ಪ್ರಭಾವಿತಗೊಂಡಿದ್ದಾನೆ ಎನ್ನಲಾಗಿರುವ ಮೂಸಾ ತನ್ನ ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳಲು ಮತ್ತು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಅವರ ಬ್ರೇನ್ ವಾಷ್ ಮಾಡಲು ಗಮನವನ್ನು ಕೇಂದ್ರೀಕರಿಸಿದ್ದಾನೆ. ಅವ್ಲಾಕಿ ಕೂಡ ಅಲ್-ಖೈದಾಗೆ ಯುವಕರ ಸೇರ್ಪಡೆಯ ಹಿಂದಿದ್ದ ರೂವಾರಿ ಎಂದು ಪರಿಗಣಿಸಲ್ಪಟ್ಟಿದ್ದ.

ಘಝ್ವತುಲ್ ಹಿಂದ್‌ನ ಅಸ್ತಿತ್ವವನ್ನು ಪೊಲೀಸರು ಆಗಾಗ್ಗೆ ನಿರಾಕರಿಸುತ್ತಲೇ ಬಂದಿರುವರಾದರೂ,ಪಟ್ಟಣಗಳಲ್ಲಿ ಮತ್ತು ಗ್ರಾಮಗಳಲ್ಲಿ ಮೂಸಾನ ಹೆಸರು ಮತ್ತು ಘೋಷಣೆ ವ್ಯಾಪಕವಾಗಿ ಹರಡುತ್ತಲೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News