ಲೈಂಗಿಕ ದೌರ್ಜನ್ಯ ಆರೋಪಗಳ ಮಧ್ಯೆ ಡಬ್ಲಿನ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಿರುವ ಪೋಪ್

Update: 2018-08-26 16:56 GMT

ಡಬ್ಲಿನ್,ಆ.26: ಲೈಂಗಿಕ ದೌರ್ಜನ್ಯಗಳು ಮತ್ತು ಅದನ್ನು ಮರೆಮಾಚಲು ನಡೆಸಿದ ಪ್ರಯತ್ನಗಳಿಂದ ಸದ್ಯ ಕ್ಯಾಥೊಲಿಕ್ ಚರ್ಚ್ ಸಾರ್ವತ್ರಿಕವಾಗಿ ಆಕ್ರೋಶಕ್ಕೆ ಗುರಿಯಾಗಿದ್ದು ಈ ಮಧ್ಯೆ ಪೋಪ್ ಫ್ರಾನ್ಸಿಸ್ ರವಿವಾರ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಿದ್ದಾರೆ.

ಲೈಂಗಿಕ ಸಂತ್ರಸ್ತರು ಮತ್ತು ಅವರ ಬೆಂಬಲಿಗರು ನ್ಯಾಯಕ್ಕಾಗಿ ಆಗ್ರಹಿಸಿ ನಗರದಲ್ಲಿ ಸ್ಟಾಂಡ್ ಫಾರ್ ಟ್ರುತ್ ರ್ಯಾಲಿ ನಡೆಸುತ್ತಿರುವ ನಡುವೆಯೇ ಪೋಪ್ ಫ್ರಾನ್ಸಿಸ್ ಫೀನಿಕ್ಸ್ ಪಾರ್ಕ್‌ನಲ್ಲಿ ಸುಮಾರು 50,000 ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚರ್ಚ್‌ನ ವೈಫಲ್ಯವನ್ನು ಒಪ್ಪಿಕೊಂಡಿರುವ ಪೋಪ್ ಫ್ರಾನ್ಸಿಸ್ ಜಗತ್ತಿನಾದ್ಯಂತ ಇರುವ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸಬೇಕು ಮತ್ತು ಇಂಥ ಶೋಷಣೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಐರ್ಲೆಂಡ್ ಪ್ರಧಾನಿ ಲಿಯೊ ವರಡ್ಕರ್ ಶನಿವಾರ ಅವರಲ್ಲಿ ಮನವಿ ಮಾಡಿದ್ದಾರೆ.

ಇಂಥ ಅಪರಾಧಗಳು ಪುನರಾವರ್ತಿಸುವ ಮೂಲಕ ಆಕ್ರೋಶಕ್ಕೆ ಮತ್ತು ನೋವಿಗೆ ಕಾರಣವಾಗಿದೆ ಹಾಗೂ ಕ್ಯಾಥೊಲಿಕ್ ಚರ್ಚ್‌ಗೆ ನಾಚಿಕೆಯ ವಿಷಯ ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದಾರೆ. ಪೋಪ್ ಶನಿವಾರದಂದು ಎಂಟು ಸಂತ್ರಸ್ತರನ್ನು ಭೇಟಿಯಾದರು. ಈ ಪೈಕಿ ಹದಿಮೂರರ ಹರೆಯದಲ್ಲಿ ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಪಾದ್ರಿಗಳಿಂದ ಲೈಂಗಿಕ ಶೋಷಣೆಗೊಳಗಾದ ಮಹಿಳೆ ಹಾಗೂ ತಾಯಿ ಅವಿವಾಹಿತೆ ಎಂಬ ಕಾರಣಕ್ಕೆ ಅಕ್ರಮವಾಗಿ ದತ್ತುಪಡೆದುಕೊಳ್ಳಲಾಗಿದ್ದ ಯುವಕ ಕೂಡಾ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News