ತಾರಿಖ್ ಕಾಸಿಮಿ ಪ್ರಕರಣ: ಎರಡು ನಿಮಿಷಗಳ ತೀರ್ಪು ನ್ಯಾಯದ ಕೊಲೆ: ಆರೋಪಿ ಪರ ವಕೀಲ
ಲಖ್ನೋ,ಆ.26: 2007ರ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿರುವ ಎರಡು ನಿಮಿಷಗಳ ತೀರ್ಪು ನ್ಯಾಯದ ಕೊಲೆಯಾಗಿದೆ ಎಂದು ಆರೋಪಿಗಳ ಪರ ವಕೀಲರು ಆರೋಪಿಸಿದ್ದಾರೆ. ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿದ ನ್ಯಾಯವಾದಿ ಮುಹಮ್ಮದ್ ಶುಐಬ್, ಹನ್ನೊಂದು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಪ್ರಕರಣದ ತೀರ್ಪನ್ನು ಕೇವಲ ಎರಡು ನಿಮಿಷಗಳಲ್ಲಿ ನೀಡಿರುವುದು ನ್ಯಾಯದ ಕೊಲೆ ಎಂದು ವ್ಯಾಖ್ಯಾನಿಸಿದ್ದಾರೆ.
ತಾರಿಖ್ ಕಾಸಿಮಿ ಮತ್ತು ಮುಹಮ್ಮದ್ ಅಖ್ತರ್ ಪ್ರಕರಣವು ಆಗಸ್ಟ್ 16ರಂದು ಜೈಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂತು. ತನ್ನ ವಾದವನ್ನು ಮುಂದುವರಿಸಿದ ಪ್ರಾಸಿಕ್ಯೂಶನ್ ಲಿಖಿತ ವಾದ ಮತ್ತು ದಾಖಲೆಗಳನ್ನು ಒಪ್ಪಿಸಲು ಸಮಯಾವಕಾಶವನ್ನು ಕೋರಿತು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ನಿಗದಿಪಡಿಸಿತು.
“ಪ್ರತಿ ಬಾರಿ ವಿಚಾರಣೆಯಂದು ನ್ಯಾಯಾಧೀಶೆ ಬೆಳಿಗ್ಗೆ 11-11.30ರ ಒಳಗೆ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದರು. ಆದರೆ ಆಗಸ್ಟ್ 23ರಂದು ಆಕೆ ತನ್ನ ಜೈಲ್ ನ್ಯಾಯಾಲಯದಲ್ಲಿರುವ ಕೋಣೆಗೆ ಮಧ್ಯಾಹ್ನ 3.35ಕ್ಕೆ ತಲುಪಿದರು. ನಾನು ಮತ್ತು ಇಬ್ಬರು ಆರೋಪಿಗಳು ಆಕೆಗಾಗಿ ನ್ಯಾಯಾಲಯದಲ್ಲಿ ದಿನವಿಡೀ ಕಾದುಕುಳಿತಿದ್ದೆವು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ತನ್ನ ವಿಶ್ರಾಂತಿ ಕೊಠಡಿಯಿಂದ ಹೊರಬಂದ ನ್ಯಾಯಾಧೀಶೆ ಎರಡು ನಿಮಿಷಗಳಲ್ಲಿ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 27ರಂದು ಪ್ರಕಟಿಸುವುದಾಗಿ ತಿಳಿಸಿ ಮರಳಿ ತಮ್ಮ ವಿಶ್ರಾಂತಿ ಕೋಣೆಗೆ ತೆರಳಿದರು” ಎಂದು ಮುಹಮ್ಮದ್ ಶೊಐಬ್ ತಿಳಿಸಿದ್ದಾರೆ.
2007ರ ನವೆಂಬರ್ 23ರಂದು ಲಖ್ನೋ ನ್ಯಾಯಾಲಯದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ತಾರಿಖ್ ಕಾಸಿಮಿ, ಖಾಲಿದ್ ಮುಜಾಹಿದ್, ಸಜ್ಜಾದುರ್ರಹ್ಮಾನ್, ಅಖ್ತರ್ ವಾನಿ, ಅಫ್ತಾಬ್ ಆಲಂ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದರು. ಸಾಕ್ಷಿ ಕೊರತೆಯ ಕಾರಣ ಬಂಧನದ 22 ದಿನಗಳ ನಂತರ ಅನ್ಸಾರಿಯನ್ನು ಬಿಡುಗಡೆಗೊಳಿಸಲಾಗಿತ್ತು. ಸಜ್ಜಾದುರ್ರಹ್ಮಾನ್‌ನನ್ನು 2011ರಲ್ಲಿ ನ್ಯಾಯಾಲಯ ನಿರ್ದೋಷಿಯೆಂದು ಬಿಡುಗಡೆಗೊಳಿಸಿತ್ತು. ತಾರಿಖ್ ಕಾಸಿಮಿ ಮತ್ತು ಖಾಲಿದ್ ಮುಜಾಹಿದ್ ಬಂಧನದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಆರ್.ಡಿ ನಿಮೇಶ್ ಆಯೋಗ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಸಲಹೆ ನೀಡಿತ್ತು.
ಖಾಲಿದ್ ವಿಚಾರಣೆಯ ನಂತರ ಫೈಝಾಬಾದ್ ನ್ಯಾಯಾಲಯದಿಂದ ಲಖ್ನೋ ಜೈಲಿಗೆ ಸಾಗುವ ಮಧ್ಯೆ ನಿಗೂಡ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ಸಾವಿನ ಬಗ್ಗೆ ರಾಜ್ಯ ಸರಕಾರ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಆದರೆ ತಾಂತ್ರಿಕ ನೆಲೆಯಲ್ಲಿ ಸಿಬಿಐ ಈ ಪ್ರಕರಣದ ತನಿಖೆ ನಡೆಸಲು ನಿರಾಕರಿಸಿತ್ತು.