ವಸತಿ ಯೋಜನೆ ಮಾಹಿತಿಗಾಗಿ ಟೋಲ್‌ಫ್ರೀ ಸಹಾಯವಾಣಿ ‘ಸ್ಪಂದನ’ ಆರಂಭ: ಯು.ಟಿ. ಖಾದರ್

Update: 2018-08-28 15:26 GMT

ಉಡುಪಿ, ಆ.28: ರಾಜೀವ ಗಾಂಧಿ ವಸತಿ ನಿಗಮಕ್ಕೆ ಸಂಬಂಧಿಸಿದ ಯೋಜನೆಗಳ ಕುರಿತು ಜನ ಸಾಮಾನ್ಯರಿಗೆ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ವಸತಿ ಇಲಾಖೆಯಿಂದ ‘ಸ್ಪಂದನ’ ಎಂಬ ಟೋಲ್ ಫ್ರೀ ಸಹಾಯವಾಣಿಯನ್ನು ಸೆ.1ರಂದು ಆರಂಭಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಮಾಹಿತಿ ಇಲ್ಲ. ಅರ್ಜಿ ಸಲ್ಲಿಸಿದರೂ ಹಣ ಬಿಡುಗಡೆಯಾಗುತ್ತಿಲ್ಲ. ಇಂತಹ ಗೊಂದಲ ಹಾಗೂ ಸಂವಹನ ಅಂತರವನ್ನು ನಿವಾರಿಸುವ ಉದ್ದೇಶ ದಿಂದ ಮತ್ತು ಮಾಹಿತಿ ಹಾಗೂ ಸಲಹೆಗಳನ್ನು ನೀಡುವುದಕ್ಕಾಗಿ ಈ ಸಹಾಯ ವಾಣಿಯನ್ನು ಆರಂಭಿಸಲಾಗಿದೆ ಎಂದರು.

ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರ ಮಕ್ಕಳು ಸರಕಾರಿ ಶಾಲೆಗಳಲ್ಲೇ ಕಲಿಯಬೇಕೆಂಬ ನಿಯಮವನ್ನು ರಾಜ್ಯ ಸರಕಾರ ಜಾರಿಗೆ ತರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಯಾರ ಮಕ್ಕಳು ಕೂಡ ಅವರ ಇಚ್ಛೆಯಂತೆ ಯಾವುದೇ ಶಾಲೆಗೆ ಹೋಗಬಹುದು. ಅಂತಹ ಕಾನೂನು ಕೇವಲ ಒಂದು ರಾಜ್ಯದಲ್ಲಿ ತರಲು ಸಾಧ್ಯವಿಲ್ಲ. ಆಗುವುದಾದರೆ ಇಡೀ ದೇಶ ದಲ್ಲಿ ಅದನ್ನು ಜಾರಿಗೊಳಿಸಬೇಕಾಗುತ್ತದೆ. ಆದರೆ ನನ್ನ ಮಗಳು ಸರಕಾರಿ ಶಾಲೆಗೆ ಹೋಗುತ್ತಿದ್ದಾಳೆ ಎಂದು ಹೇಳಿದರು.

ಕಾಂಗ್ರೆಸ್ ಆಡಳಿತದ ಉಡುಪಿ ನಗರಸಭೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅದು ಇನ್ನಷ್ಟು ವೇಗವಾಗಿ ಪಡೆಯಬೇಕಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ವಾರಾಹಿಯಿಂದ ನೀರು ತರುವ ಯೋಜನೆ ಆದಷ್ಟು ಶೀಘ್ರದಲ್ಲೇ ಆರಂಭಿಸಲು ತೀರ್ಮಾನಿಸಿದೆ. 600 ನಿವೇಶನ ರಹಿತ ರಿಗೆ ವಸತಿ ಸಮುಚ್ಛಯ ನಿರ್ಮಿಸುವ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಬಿಜೆಪಿಯು ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರ ಆರೋಪಗಳಿಗೆ ಯಾವುದೇ ಪುರಾವೆ ಇಲ್ಲ. ಇವರ ಆರೋಪಗಳಿಗೆ ಪುರಾವೆಗಳಿದ್ದರೆ ಇವರು ಯಾಕೆ ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಪ್ರಶ್ನಿಸಿದ ಸಚಿವರು, ಇದೆಲ್ಲ ಕೇವಲ ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಆರೋಪಗಳಾ ಗಿವೆ. ಇದರಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯ ಗಳಿಸುವ ವಿಶ್ವಾಸ ಇದೆ ಎಂದು ಹೇಳಿದರು.

ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎರಡು ಪಕ್ಷದ ವರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಈ ಸರಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಸಮನ್ವಯ ಸಮಿತಿಗೆ ಎಲ್ಲರು ಬೆಂಬಲ ನೀಡು ತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರಕ್ಕೆ ಉತ್ತಮ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆಂದು ಅವರು ಪ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವಾ, ರಾಕೇಶ್ ಮಲ್ಲಿ, ದಿನೇಶ್ ಪುತ್ರನ್, ಸತೀಶ್ ಅಮೀನ್ ಪಡುಕೆರೆ, ಇಬ್ರಾಹಿಂ ಮಟಪಾಡಿ, ಹಬೀಬ್ ಅಲಿ, ಭಾಸ್ಕರ ರಾವ್ ಕಿದಿಯೂರು, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News