ಭಾರತಕ್ಕೆ ಸಂಘರ್ಷ ಬೇಡ; ರಾಜತಂತ್ರ ಸಾಕು: ಸಚಿವ ಎಂ.ಜೆ. ಅಕ್ಬರ್

Update: 2018-08-28 16:25 GMT

ಮಣಿಪಾಲ, ಆ.28: ಭಾರತ ತನ್ನ ನೆರೆಯ ದೇಶಗಳೊಂದಿಗೆ ಸಂಘರ್ಷಕ್ಕೆ ಇಳಿಯದೇ ರಾಜತಂತ್ರ (ಡಿಪ್ಲೋಮಸಿ)ದ ಮೂಲಕ ಸೌಹಾರ್ದ ಸಂಬಂಧ ವನ್ನು ಹೊಂದಲು ಬಯಸುತ್ತದೆ ಎಂದು ಕೇಂದ್ರದ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಹೇಳಿದ್ದಾರೆ.

ಮಾಹೆಯ ಡಿಪಾರ್ಟ್‌ಮೆಂಟ್ ಆಫ್ ಜಿಯೋ ಪೊಲಿಟಿಕ್ಸ್ ಎಂಡ್ ಇಂಟರ್‌ನ್ಯಾಷನಲ್ ರಿಲೇಷನ್ಸ್ ವತಿಯಿಂದ ಮಣಿಪಾಲದ ಹೊಟೇಲ್ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನಲ್ಲಿ ಆಯೋಜಿಸಲಾಗಿದ್ದ ‘21ನೇ ಶತಮಾನ ದಲ್ಲಿ ಭಾರತದ ವಿದೇಶಿ ನೀತಿ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.

ಭಾರತ ಇಂದು ವಿಶ್ವದಲ್ಲಿ ಶಾಂತಿಯನ್ನು ಬಯಸುತ್ತಿದೆಯೇ ಹೊರತು ಸಂಘರ್ಷವನ್ನಲ್ಲ ಎಂದ ಸಚಿವರು, ರಕ್ಷಣಾ ಸಚಿವಾಲಯ ಎಂಬುದು ದೇಶದ ಹಾಗೂ ಜನರ ರಕ್ಷಣೆಗೆ ಇರುವುದೇ ಹೊರತು ಆಕ್ರಮಣಕ್ಕಲ್ಲ. ದೇಶದ ಭದ್ರತೆ ಮೂಲಭೂತ ವಿಷಯವಾಗಿದ್ದು, 21ನೇ ಶತಮಾನದ ಭಾರತದಲ್ಲಿ ಸಮುದ್ರ ಮತ್ತು ಆಕಾಶ, ರಕ್ಷಣಾ ತಂತ್ರದ ಕೇಂದ್ರಬಿಂದುವಾಗಿರಲಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಸ್ತುತ ವಿದ್ಯಮಾನದಲ್ಲಿ ನೆಲದ ರಕ್ಷಣೆಯ ವಿಷಯ ಪ್ರಮುಖವಾಗುತ್ತಿಲ್ಲ. ಸಮುದ್ರ ಮತ್ತು ಆಕಾಶದ ಮೇಲಿನ ಹಾಗೂ ಓಜೋನ್ ಪದರದ ಕೆಳಭಾಗದ ರಕ್ಷಣಾ ತಂತ್ರಗಾರಿಕೆ ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸುತ್ತಿದೆ. ಮುಂದಿನ ಐದರಿಂದ 20 ವರ್ಷಗಳ ಅವಧಿಯಲ್ಲಿ ಇದು ದೇಶಗಳ ಅತೀ ದೊಡ್ಡ ಸವಾಲಾಗಿ ಪರಿಣಮಿಸಲಿವೆ ಎಂದವರು ಭವಿಷ್ಯ ನುಡಿದರು.

ಭದ್ರತೆ ಮತ್ತು ಆರ್ಥಿಕತೆ ದೇಶದ ಶಕ್ತಿಯಾಗಿದೆ. ಇದು ವಿಶ್ವದಲ್ಲಿ ಪ್ರಭಾವ ಬೀರುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಶಾಂತಿ ದೇಶಕ್ಕೆ ಶಕ್ತಿಯನ್ನು ತುಂಬುತ್ತದೆ. ಶಾಂತಿಯಿಂದಿರುವ ದೇಶವೊಂದು ವಿಶ್ವದೊಂದಿಗೆ ಶಾಂತಿಯನ್ನು ಹೊಂದಿರುತ್ತದೆ. ಹಂಚಿಕೊಂಡಾಗ ಅಭಿವೃದ್ಧಿ ಸುವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ. ಈ ವಿಷಯದಲ್ಲಿ ವಿಶ್ವವೇ ಭಾರತದ ಮೇಲೆ ವಿಶ್ವಾಸವಿರಿಸಿದೆ ಎಂದರು.

ಆಧುನಿಕತೆಯ ಅಗತ್ಯತೆ ಇಂದು ಅಧಿಕವಾಗಿದೆ. ಆಧುನಿಕತೆಯನ್ನು ಬಣ್ಣಿಸು ವುದಕ್ಕಿಂತ ಬಳಸುವುದು ಹೆಚ್ಚು ಸುಲಭ. ಇದು ಪ್ರಜಾಪ್ರಭುತ್ವದ ಸ್ವಾತಂತ್ರವನ್ನು ಒಳಗೊಂಡಿರಬೇಕಾಗಿದೆ. ನಂಬಿಕೆಯ ಸ್ವಾತಂತ್ರವು ಸಮಾಜದಲ್ಲಿ ಸಮಾನ ವಾದ ನಂಬಿಕೆಗೆ ಒತ್ತು ನೀಡುತ್ತದೆ. ನಂಬಿಕೆಯ ಹಕ್ಕು ಮೂಲಭೂತವಾದುದು ಎಂದು ಅಕ್ಬರ್ ಒತ್ತಿ ಹೇಳಿದರು.

ಭಾರತ-ಚೀನ ನಡುವಿನ ಸಂಬಂಧ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ ಅಕ್ಬರ್, ಇಂದು ದೇಶದ ವಿದೇಶಿ ನೀತಿ ಇಡೀ ವಿಶ್ವದ ಮೆಚ್ಚುಗೆಯನ್ನು ಪಡೆದಿದೆ. ಶಾಂತಿ, ಭದ್ರತೆ ಹಾಗೂ ಆರ್ಥಿಕತೆ ದೇಶದ ಅಭಿವೃದ್ಧಿಯ ಮೂಲಮಂತ್ರಗಳಾಗಿವೆ. ದೇಶಗಳ ಎದುರು ಇಂದು ಅಸಾಧಾರಣವಾದ ಅಭಿವೃದ್ಧಿ ಸಾಧ್ಯತೆಗಳ ಜೊತೆ ಜೊತೆಗೆ ಸವಾಲುಗಳೂ ಇವೆ ಎಂದು ದೇಶದ ಅಗ್ರಗಣ್ಯ ಪತ್ರಕರ್ತ-ಸಂಪಾದಕರಲ್ಲಿ ಒಬ್ಬರಾಗಿದ್ದ ಅಕ್ಬರ್ ನುಡಿದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸಚಿವ ಎಂ.ಜೆ.ಅಕ್ಬರ್ ಅವರನ್ನು ಸನ್ಮಾನಿಸಿದರು. ಕುಲಪತಿ ಡಾ.ಎಚ್.ವಿನೋದ್ ಭಟ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ.ಅರವಿಂದ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News