ಉಡುಪಿ: ಗ್ರಾಪಂಗಳಲ್ಲಿ ಆರ್‌ಟಿಸಿ ತ್ವರಿತ ನೀಡಲು ಡಿಸಿ ಸೂಚನೆ

Update: 2018-08-28 16:54 GMT

ಉಡುಪಿ, ಆ.28: ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ನಾಗರಿಕರಿಗೆ ಆರ್‌ಟಿಸಿ ಪ್ರತಿ ನೀಡಲು ವಿನಾ ಕಾರಣ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಂಣದಲ್ಲಿ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ನೆಟ್‌ವರ್ಕ್ ಸಮಸ್ಯೆ ಹಾಗೂ ಹಾಳೆಯ ಕೊರತೆಯ ನೆಪವೊಡ್ಡಿ ಜನರಿಗೆ ಗ್ರಾಪಂ ಕೇಂದ್ರಗಳಲ್ಲಿ ಆರ್‌ಟಿಸಿ ನೀಡಲು ವಿಳಂಬಿಸಲಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿವೆ. ಇದರಿಂದ ಗ್ರಾಮಾಂತರ ಜನರು ತಾಲೂಕು ಕಚೇರಿಗೆ ಬಂದು ಆರ್‌ಟಿಸಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದವರು ನುಡಿದರು.

ಗ್ರಾಮೀಣ ಪ್ರದೇಶದ ಜನರನ್ನು ಈ ರೀತಿ ಸತಾಯಿಸುವುದನ್ನು ಇನ್ನು ಸಹಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಕ್ರಮಕೈಗೊಂಡು, ಎಲ್ಲಾ ಗ್ರಾಪಂ ಕೇಂದ್ರಗಳಲ್ಲಿಯೇ ನಾಗರಿಕರಿಗೆ ಆರ್‌ಟಿಸಿ ದೊರಕುವಂತೆ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ವಿವಿಧ ಇಲಾಖೆಗಳ ಎಸ್‌ಸಿಪಿ/ಟಿಎಸ್‌ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಈಗಾಗಲೇ ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. 2017-18 ರವರೆಗೆ ಮಂಜೂರಾಗಿರುವ ಎಲ್ಲಾ ಅಂಬೇಡ್ಕರ್ ಭವನಗಳ ಕಾಮಗಾರಿ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಸ್ತಾಂತರಿಸಬೇಕು ಎಂದು ಅನುಷ್ಠಾನಾಧಿ ಕಾರಿಗಳಿಗೆ ಸೂಚಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ವಿಮಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು. ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಇನ್ನೂ ತಯಾರಿಸದ ಇಲಾಖೆ ಗಳು ಕೂಡಲೇ ಕ್ರಿಯಾಯೋಜನೆ ಅಂತಿಮಗೊಳಿಸಲು ಅವರು ಆದೇಶಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ ಹಾಗೂ ವಿವಿಧ ಇಲಾಖಾಧಿಕಾರಿ ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News