ಮಣಿಪಾಲ: ಸೆ.6ರಿಂದ ಮಣಿಪಾಲ ಸಾಹಿತ್ಯ ಮೇಳ ‘ಮಿಲಾಪ್’

Update: 2018-08-28 16:56 GMT

ಮಣಿಪಾಲ, ಆ. 28: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಯೋಜಿಸುವ ವಾರ್ಷಿಕ ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲೆಗಳ ವೇದಿಕೆ (ಮಿಲಾಪ್)ನ ಎರಡನೇ ಅಧ್ಯಾಯ ಸೆ.6ರಿಂದ 8ರವರೆಗೆ ಮಣಿಪಾಲದ ಡಾ.ಟಿಎಂಎ ಪೈ ಹಾಲ್‌ನಲ್ಲಿ ನಡೆಯಲಿದೆ ಎಂದು ಮಿಲಾಪ್‌ನ ಸಂಯೋಜಕಿ ಡಾ.ನೀತಾ ಇನಾಂದಾರ್ ತಿಳಿಸಿದ್ದಾರೆ.

ಇಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ಮೇಳದ ಧ್ಯೇಯವಾಕ್ಯ ‘ಸಹಸ್ರಮಾನದ ಮರುಭೇಟಿ: ಸಂಪ್ರದಾಯ ಮತ್ತು ರೂಪಾಂತರ’ ಎಂದರು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಂದಿಯನ್ನು ಅದರಲ್ಲೂ ಎಳೆಯ ಹಾಗೂ ಯುವ ಮನಸ್ಸುಗಳನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮಿಲಾಪ್-2018ನ್ನು ಹಿರಿಯ ಪಂಜಾಬಿ ನಾಟಕಕಾರ, ಸಾಹಿತ್ಯ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿಗಳ ಪ್ರಶಸ್ತಿ ವಿಜೇತ ಅತ್ಮಜಿತ್ ಸಿಂಗ್ ಸೆ.6 ರಂದು ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. ಕನ್ನಡದ ಹಿರಿಯ ನಾಟಕಕಾರ, ಕವಿ, ಸಾಹಿತ್ಯ ಅಕಾಡೆಮಿ ಹಾಗೂ ಸಂಗೀತನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಪ್ರೊ.ಎಚ್.ಎಸ್.ಶಿವಪ್ರಕಾಶ್ ಪ್ರಧಾನ ಭಾಷಣ ಮಾಡಲಿದ್ದಾರೆ. ಮಾಹೆ ಕುಲಪತಿ ಡಾ.ವಿನೋದ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಈ ಬಾರಿ ಸಾಹಿತ್ಯ ಮೇಳ, ರಂಗಭೂಮಿ ಕಾರ್ಯಾಗಾರ, ಯುವ ಮತ್ತು ಮಕ್ಕಳ ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೇ ಕಟ್ಟಡದ ವಿವಿದೆಡೆಗಳಲ್ಲಿ ನಡೆಯಲಿದ್ದು, ಇದರಿಂದ ಆಸಕ್ತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಮಿಲಾಪ್ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವವರು ಆನ್‌ಲೈನ್ ಮೂಲಕ ಅಥವಾ ನೇರವಾಗಿ ಸಂಘಟಕರಲ್ಲಿ ತಮ್ಮ ಹೆಸರುಗಳನ್ನು ನೊಂದಾ ಯಿಸಿಕೊಳ್ಳಬಹುದು. ಮಿಲಾಪ್-2018ರಲ್ಲಿ ದೇಶ-ವಿದೇಶಗಳ ಸುಮಾರು 50 ಖ್ಯಾತನಾಮ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿರುವರು. ಇವರಲ್ಲಿ ರಂಜಿತ್ ಹೊಸಕೋಟೆ, ಚಾರು ನಿವೇದಿತಾ, ಸಂಜೊಯ್ ಹಜಾರಿಕಾ, ಅಲೋಕ್ ರಾಜವಾಡೆ, ಜಯಂತ್ ಕಾಯ್ಕಿಣಿ, ಕುನ್‌ಝಾಂಗ್ ಚೋಡನ್ ಮುಂತಾದವರು ಸೇರಿದ್ದಾರೆ.

ಸಾಹಿತ್ಯ ಮೇಳದಲ್ಲಿ ಮೊದಲ ದಿನ ಅಪರಾಹ್ನ 2:00ಗಂಟೆಯಿಂದ ಕನ್ನಡದ ನಾಲ್ವರು ಪ್ರಮುಖ ಚಿಂತಕ, ವಿಮರ್ಶಕರಾದ ಜಿ.ರಾಜಶೇಖರ್, ರಾಜೇಂದ್ರ ಚೆನ್ನಿ, ಎಸ್.ದಿವಾಕರ್ ಹಾಗೂ ತೇಜಶ್ರೀ ಜೆ.ಎನ್. ಅವರು ಆಧುನಿಕ ಕನ್ನಡದ ನಾಲ್ವರು ಬರಹಗಾರರ ಮೂಲಕ ಸಹಸ್ರಮಾನದ ಸಮಾಲೋಚನೆ ಕುರಿತು ಸಂವಾದ ನಡೆಸಲಿದ್ದು, ಟಿ.ಪಿ.ಅಶೋಕ್ ಇದನ್ನು ನಡೆಸಿಕೊಡಲಿದ್ದಾರೆ.

ರಂಗಭೂಮಿ ಕಾರ್ಯಾಗಾರವನ್ನು ನಿನಾಸಂನ ಅಕ್ಷರ ಕೆ.ವಿ. ನಡೆಸಿ ಕೊಡಲಿದ್ದಾರೆ. ಕನ್ನಡ ರಂಗ ನಿರ್ದೇಶಕಿ ಚಂಪಾ ಶೆಟ್ಟಿ, ದೀಪಾ ಗಣೇಶ್, ಮರಾಠಿ ರಂಗಕರ್ಮಿ ಪ್ರಸಾದ್ ವನರಸೆ, ಆರ್.ಪರಮಶಿವನ್ ಅವರು ವಿವಿಧ ರಂಗಭೂಮಿಯ ವಿವಿಧ ಆಯಾಮಗಳ ಕುರಿತು ಮಾತನಾಡಲಿದ್ದಾರೆ.

ಮಕ್ಕಳಿಗಾಗಿಯೂ ಕಾರ್ಯಾಗಾರ ಹಾಗೂ ಇತರ ವೈವಿಧ್ಯಮಯ ಕಾರ್ಯ ಕ್ರಮಗಳಿದ್ದು, ಚಿತ್ರಕಲಾ ಪ್ರದರ್ಶನದಲ್ಲಿ ವೀಣಾ ಶ್ರೀನಿವಾಸ್‌ಅವರು ಕಾವಿ ಕಲೆಯ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಛಾಯಾಚಿತ್ರ ಪ್ರದರ್ಶನದಲ್ಲಿ ಖ್ಯಾತ ಛಾಯಾಗ್ರಾಹಕ ಸಂದೇಶ್ ಭಂಡಾರೆ ಅವರಿಂದ ಪ್ರದರ್ಶನ ಹಾಗೂ ಕಾರ್ಯಾಗಾರ ಅಲ್ಲದೇ ಮಾಹೆಯ ವಿದ್ಯಾರ್ಥಿಗಳಿಗೆ ಪ್ರದರ್ಶನವೂ ನಡೆಯಲಿದೆ. 

ಸುದ್ದಿಗೋಷ್ಠಿಯಲ್ಲಿ ಡಾ.ಶುಭ ಎಚ್.ಎಸ್. ಹಾಗೂ ಅನುಷಾ ರವಿಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News