ಏಷ್ಯನ್ ಗೇಮ್ಸ್: ಆಳ್ವಾಸ್‍ನ ಧಾರುಣ್‍ಗೆ ಬೆಳ್ಳಿ

Update: 2018-08-28 17:35 GMT

ಮೂಡುಬಿದಿರೆ, ಆ. 28: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನಲ್ಲಿ ಆಳ್ವಾಸ್‍ನ ಬಿಎಚ್‍ಆರ್‍ಡಿ ಮೂರನೇ ವರ್ಷದ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ 400 ಮೀಟರ್ ಹಡಲ್ಸ್‍ನಲ್ಲಿ 48.96 ಸೆಕೆಂಡುಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಪಡೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 

ಆಳ್ವಾಸ್ ಕಾಲೇಜು ವಿದ್ಯಾರ್ಥಿಯಾಗಿರುವ ಧಾರುಣ್  2016ರ ರಿಯೋ ಒಲಿಂಪಿಕ್ಸ್‍ನಲ್ಲಿ ಹಾಗೂ 2017ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 

ಧಾರುಣ್ ಕಳೆದ ಮೂರು ವರ್ಷಗಳಲ್ಲಿ 400 ಮೀಟರ್ ಹಡಲ್ಸ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಅಖಿಲ ಭಾರತ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ ಮೂರು ಬಾರಿ ಚಿನ್ನ ಹಾಗೂ ಕೂಟ ದಾಖಲೆಯ ಸಾಧನೆ ಮಾಡಿರುತ್ತಾರೆ. ಈ ಸಾಧನೆಗೆ  ಮಂಗಳೂರು ವಿಶ್ವವಿದ್ಯಾನಿಲಯವು ಒಂದು ಲಕ್ಷ ರೂ ನಗದು ಪುರಸ್ಕಾರ ನೀಡಿ ಗೌರವಿಸಿತ್ತು.  ಕಳೆದ ಮೂರು ವರ್ಷಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಅವರು ಧಾರುಣ್ ಅವರಿಗೆ ಕ್ರೀಡಾ ಪ್ರೋತ್ಸಾಹ ಹಾಗೂ ಖರ್ಚುವೆಚ್ಚಗಳನ್ನು ನೀಡುತ್ತಿದ್ದು ಧಾರುಣ್ ಸಾಧನೆಗೆ  ಸಂತಸ ವ್ಯಕ್ತಪಡಿಸಿ ಅಭಿನಂದನೆ  ಸಲ್ಲಿಸಿದ್ದಾರೆ.

ಈ ಬಾರಿ  79ನೆಯ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸುತ್ತಿದ್ದು  ಈ ಸಂದರ್ಭದಲ್ಲಿ ಮೂಡಬಿದಿರೆಯ ಜನತೆಯ ಪರವಾಗಿ ಏಷ್ಯನ್ ಗೇಮ್ಸ್ ಪದಕ ವಿಜೇತ ಧಾರುಣ್ ಅವರನ್ನು ಅಭಿನಂದಿಸಲಾಗುವುದು ಎಂದು ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News