ಅತೀ ಶೀಘ್ರದಲ್ಲಿ ಮಂಗಳೂರಿನಲ್ಲಿ ಇ- ಆಡಳಿತ: ಸಚಿವ ಖಾದರ್

Update: 2018-08-29 07:33 GMT

ಮಂಗಳೂರು, ಆ.29: ನಗರವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅತೀ ಶೀಘ್ರದಲ್ಲೇ ಕಾಗದ ರಹಿತ, ಅಟೊಮೈಸೇಶನ್ ಹಾಗೂ ಇ ಆಡಳಿತವವನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದ್ದಾರೆ. 

ಇಂದು ನೂತನವಾಗಿ ನಾಮಕರಣಗೊಂಡ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮನಪಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ನಗರದ ಕದ್ರಿ ಪಾರ್ಕ್‌ನ ಜಂಕ್ಷನ್ ರಸ್ತೆಯನ್ನು ಅಭಿವೃದ್ಧಿಗೊಳಿಸುವುದು, ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಯ ಮೂಲಕ ನಗರವನ್ನು ಮಾದರಿ ನಗರವನ್ನಾಗಿಸಲು ಮಹಾನಗರ ಪಾಲಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಸಮಾಜದ ಎಲ್ಲಾ ವರ್ಗಗಳ ಹಿತಚಿಂತಕರಾಗಿದ್ದ ಕುದ್ಮುಲ್ ರಂಗರಾವ್ ದಲಿತ ವರ್ಗದ ವಿಶೇಷ ಕಾಳಜಿಯೊಂದಿಗೆ ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾದವರು. ಅವರ ಹೆಸರನ್ನು ಪುರಭವನಕ್ಕೆ ನಾಮಕರಣ ಮಾಡುವ ಮೂಲಕ ಉತ್ತಮ ಕಾರ್ಯವನ್ನು ಮನಪಾ ಮಾಡಿದೆ ಎಂದು ಅವರು ಹೇಳಿದರು.

ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಗೆ ಒಳಪಟ್ಟಿದ್ದು, ನಗರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಐದು ವರ್ಷಗಳಲ್ಲಿ 1,000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರಕಿದೆ. ಈ ಕಾಮಗಾರಿಗಳು 10,000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಾಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಶ್ರಮಿಸಬೇಕು ಎಂದು ಸಚಿವ ಖಾದರ್ ಸಲಹೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಗರದಲ್ಲಿ ಆದಾಯ ಸೃಷ್ಟಿಸುವ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎಂದರು.

ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಸೇತುವೆಗೆ ರೈಲ್ವೆ ಇಲಾಖೆಯಿಂದ ಅಂಕಿತ ದೊರಕಿದೆ. ಮನಪಾದಿಂದ ಹಣ ಭರಿಸಲು ಸಾಧ್ಯವಾಗದ ಕಾರಣ ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಿ ಶೀಘ್ರ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಬೇಕು ಎಂದರು. ಪಂಪ್‌ವೆಲ್, ತೊಕ್ಕೊಟ್ಟು ಸೇತುವೆ ನಿರ್ಮಾಣ ಕಾಮಗಾರಿ ಕುರಿತಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಸಭೆ ನಡೆಸಿದ್ದಾರೆ.

ಜನವರಿಯೊಳಗೆ ನವಯುಗ್ ಕಂಪನಿಯವರು ಎರಡೂ ಸೇತುವೆಗಳನ್ನು ಸಂಪೂರ್ಣಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದರು. ಇಂದು ಮನಪಾ ವತಿಯಿಂದ ಕೈಗೆತ್ತಿಕೊಂಡಿರುವ 472.41 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನಡೆಯಿತು.

ವೇದಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಕೆ., ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಲತಾ ಸಾಲ್ಯಾನ್, ನವೀನ್ ಡಿಸೋಜ, ಕಾರ್ಪೊರೇಟರ್ ದಿವಾಕರ್, ಮನಪಾ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News