ಕಾಂಗ್ರೆಸ್ ಅಪಪ್ರಚಾರದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಜೇಟ್ಲಿ

Update: 2018-08-29 17:04 GMT

ಹೊಸದಿಲ್ಲಿ, ಆ.29: ರಫೇಲ್ ಯುದ್ಧವಿಮಾನ ಒಪ್ಪಂದದ ಕುರಿತು ಕಾಂಗ್ರೆಸ್ ಪಕ್ಷ ನಿರಂತರ ಸುಳ್ಳು ಹೇಳುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ನಡೆಸುತ್ತಿರುವ ಅಪಪ್ರಚಾರದಿಂದ ರಾಷ್ಟ್ರದ ಭದ್ರತೆಗೆ ಗಂಭೀರ ಅಪಾಯ ತಂದಿರಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ತಮ್ಮ ಫೇಸ್‌ಬುಕ್‌ನಲ್ಲಿ ರಾಹುಲ್ ಗಾಂಧಿಗೆ 15 ಪ್ರಶ್ನಾವಳಿಯನ್ನು ಪೋಸ್ಟ್ ಮಾಡಿರುವ ಜೇಟ್ಲಿ, 2007ರಲ್ಲಿ ಯುಪಿಎ ಸರಕಾರ ರಫೇಲ್ ಯುದ್ಧವಿಮಾನ ಖರೀದಿಗೆ ಫ್ರಾನ್ಸ್ ಸರಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದಕ್ಕಿಂತ 2015ರಲ್ಲಿ ಎನ್‌ಡಿಎ ಸರಕಾರ ಮಾಡಿಕೊಂಡಿರುವ ಒಪ್ಪಂದ ಅದೆಷ್ಟೋ ಉತ್ತಮವಾಗಿದೆ ಎಂದಿದ್ದಾರೆ. ರಾಹುಲ್ ಅವರ ದುಸ್ಸಾಹಸಗಳು ದೇಶದ ಹಿತಾಸಕ್ತಿಗೆ ಘಾಸಿ ಎಸಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದು ರಾಹುಲ್ ಮತ್ತು ಕಾಂಗ್ರೆಸ್ ಪಕ್ಷ ತಕ್ಷಣ ಇದಕ್ಕೆ ಉತ್ತರಿಸಬೇಕು ಎಂದು ಜೇಟ್ಲಿ ಹೇಳಿದ್ದಾರೆ. 

ರಫೇಲ್ ಒಪ್ಪಂದದ ಬಗ್ಗೆ ಅವರು ಮಾಡುತ್ತಿರುವ ಆರೋಪಗಳು ನರ್ಸರಿ ಶಾಲೆಯಲ್ಲಿ ನಡೆಯುತ್ತಿರುವ ಚರ್ಚೆಯಂತಿದೆ. ನಾನು 500 ರೂ. ನೀಡಿದ್ದೆ, ಆದರೆ ನೀವೀಗ 1,600 ರೂ. ನೀಡುತ್ತಿದ್ದೀರಿ ಎಂಬ ರೀತಿಯಲ್ಲಿ ಅವರ ಚರ್ಚೆ ಸಾಗುತ್ತಿದೆ. ರಾಹುಲ್ ಅವರ ಈ ಹೇಳಿಕೆಯಿಂದಲೇ ಅವರ ತಿಳುವಳಿಕೆಯ ಮಟ್ಟ ತಿಳಿಯುತ್ತದೆ. ಮೊದಲು ಮೂಲ ವಿಷಯಗಳನ್ನು ಅರಿತುಕೊಂಡು ಅವರು ಮಾತಾಡಲಿ. ಈ ಒಪ್ಪಂದದಲ್ಲಿ ಅಡಕವಾಗಿರುವ ಗೌಪ್ಯತೆ ಕಾಯ್ದುಕೊಳ್ಳುವ ಷರತ್ತಿನ ಕಾರಣ ಈ ಬಗ್ಗೆ ತಾನು ಹೆಚ್ಚು ಹೇಳಲಾಗದು. ಆದರೆ ರಾಹುಲ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಜೈಪುರದಲ್ಲಿ ಮಾತನಾಡುವಾಗ ಅವರು ಪ್ರತೀ ರ್ಯಾಫೆಲ್ ವಿಮಾನದ ಬೆಲೆ 540 ಕೋಟಿ ರೂ. ಎಂದರು. ದಿಲ್ಲಿ ಮತ್ತು ಕರ್ನಾಟಕಕ್ಕೆ ಹೋದಾಗ ಈ ಬೆಲೆ 700 ಕೋಟಿ ರೂ. ಆಯಿತು. ಸಂಸತ್ತಿನಲ್ಲಿ ಮಾತನಾಡುವಾಗ 520 ಕೋಟಿ ರೂ. ಎಂದರು. ಅಂದರೆ ತಾವು ಏನು ಹೇಳುತ್ತಿದ್ದೇವೆ ಎಂಬುದೇ ತಿಳಿಯದೆ ರಾಹುಲ್ ಮತ್ತು ಕಾಂಗ್ರೆಸ್ ಪಕ್ಷದವರು ಮಾತನಾಡುತ್ತಿದ್ದಾರೆ. ತಮ್ಮ ಪಕ್ಷವೇ 2007ರಲ್ಲಿ ಈ ಒಪ್ಪಂದವನ್ನು ಮಾಡಿಕೊಂಡಿದೆ ಎಂಬುದನ್ನು ಬಹುಷಃ ರಾಹುಲ್ ಮರೆತಿದ್ದಾರೆ ಎಂದು ಜೇಟ್ಲಿ ಹೇಳಿದರು.

ರಕ್ಷಣಾ ಒಪ್ಪಂದದಲ್ಲಿ ಹಗರಣ ಮಾಡುವುದರಲ್ಲಿ ಕಾಂಗ್ರೆಸ್ ಹೆಸರಾಗಿದೆ. ವೈಮಾನಿಕ ಬಲವನ್ನು ಹೆಚ್ಚಿಸುವ ಯಾವುದೇ ಒಪ್ಪಂದವನ್ನು ಅಧಿಕಾರದಲ್ಲಿರುವಾಗ ಅವರಿಂದ ನೆರವೇರಿಸಲು ಆಗಲಿಲ್ಲ. ವಿದೇಶದಿಂದ ಶೇ.100ರಷ್ಟು ಖರೀದಿಗೆ ಮಾತ್ರ ಮುಂದಾಗುತ್ತಿದ್ದ ಕಾಂಗ್ರೆಸ್ ಎಂದಿಗೂ ಭಾರತದಲ್ಲಿ ಖಾಸಗಿ ಉತ್ಪಾದನೆಗೆ ಬೆಂಬಲ ನೀಡಲಿಲ್ಲ ಎಂದು ಜೇಟ್ಲಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News