ತೈಲ ಬೆಲೆ ಏರಿಕೆ: ಅಚ್ಛೇದಿನ್ ಹೇಳಿಕೆ ಅಣಕಿಸಿದ ಶಿವಸೇನೆ

Update: 2018-08-29 17:28 GMT

ಮುಂಬೈ, ಆ.29: ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿರುವ ಎನ್‌ಡಿಎ ಮೈತ್ರಿಕೂಟದ ಹಿರಿಯ ಸಹಪಕ್ಷ ಶಿವಸೇನೆ, ಅಚ್ಛೇದಿನ್ ಹಾಗಿರಲಿ, ಮೊದಲು ಜನರಿಗೆ ಸ್ಥಿರವಾದ ಜೀವನ ಖಾತರಿಗೊಳಿಸಿ ಎಂದು ಸಲಹೆ ನೀಡಿದೆ.

ಎನ್‌ಡಿಎ ಸರಕಾರದ ಅವಧಿಯಲ್ಲಿ ತೈಲ ಬೆಲೆ ಎಷ್ಟು ಬಾರಿ, ಎಷ್ಟು ಏರಿಕೆಯಾಗಿದೆ ಎಂಬ ಮಾಹಿತಿಯನ್ನು ದೇಶದಲ್ಲಿರುವ ಪೆಟ್ರೋಲ್ ಪಂಪ್‌ಗಳಲ್ಲಿ ಪ್ರದರ್ಶಿಸಿ, ಅದರ ಬಳಿ ಪ್ರಧಾನಿ ಮೋದಿಯ ಭಾವಚಿತ್ರ ತೂಗುಹಾಕುವಂತೆ ತಿಳಿಸಲಾಗಿದೆ ಎಂದು ಶಿವಸೇನೆ ತಿಳಿಸಿದೆ.

ಈ ಹಿಂದೆ ತೈಲ ಬೆಲೆ ಸಾರ್ವಕಾಲಿಕ ಗರಿಷ್ಟಮೊತ್ತ ತಲುಪಿದಾಗ ಕೇಂದ್ರ ಸರಕಾರ ಮಧ್ಯಪ್ರವೇಶಿಸಿದ್ದು ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ನೆಮ್ಮದಿ ಕ್ಷಣಿಕವಾಗಿದೆ. ಈಗ ಮತ್ತೆ ಬೆಲೆಗಳು ಗಗನಕ್ಕೇರಿವೆ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ಟೀಕಿಸಲಾಗಿದೆ. ತೈಲ ಬೆಲೆಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗದು ಎಂದು ಸರಕಾರ ತಿಳಿಸಿರುವ ಕಾರಣ ಕಡಿಮೆ ದರದಲ್ಲಿ ತೈಲಗಳು ಲಭ್ಯವಾಗಲಿವೆ ಎಂಬ ನಿರೀಕ್ಷೆ ಕನಸಿನ ಮಾತಾಗಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಮೋದಿಯವರ ಫೋಟೋ ಪ್ರದರ್ಶಿಸಬೇಕೆಂದು ಸರಕಾರ ಆದೇಶಿಸಿರುವುದಾಗಿ ಹೇಳಲಾಗುತ್ತಿದೆ. ಇದು ನಿಜವಾದಲ್ಲಿ, ಆ ಫೋಟೋದ ಕೆಳಭಾಗದಲ್ಲಿ ಮೋದಿ ಸರಕಾರದ ಅವಧಿಯಲ್ಲಿ ತೈಲ ಬೆಲೆಗಳ ದರ ಹೆಚ್ಚಳದ ಮಾಹಿತಿಯನ್ನೂ ನಮೂದಿಸಬೇಕು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News