ಹಲ್ಲುನೋವಿನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಬಂಗಾಳದ ಪ್ರತಿಭೆ ಸ್ವಪ್ನಾ

Update: 2018-08-29 18:07 GMT

ಜಕಾರ್ತ,ಆ.29: ಏಶ್ಯನ್ ಗೇಮ್ಸ್‌ನ ಹೆಪ್ಟಾಥ್ಲಾನ್‌ನಲ್ಲಿ ಸ್ವರ್ಣ ಜಯಿಸಿದ ಸ್ವಪ್ನಾ ಬರ್ಮನ್ ಇತಿಹಾಸ ನಿರ್ಮಿಸಿದ್ದಾರೆ. ಹಲ್ಲುನೋವಿನ ನಡುವೆಯೂ ಚೀನಾ ಅಥ್ಲೀಟ್ ಸವಾಲನ್ನು ಮೆಟ್ಟಿನಿಂತ ಪಶ್ಚಿಮಬಂಗಾಳದ ಸ್ವಪ್ನಾ ಚಿನ್ನದ ನಗೆ ಬೀರಿ ಶ್ಲಾಘನಾರ್ಹ ಸಾಧನೆ ಮಾಡಿದ್ದಾರೆ.

21ರ ಹರೆಯದ ಬರ್ಮನ್ ಎರಡು ದಿನಗಳ ಕಾಲ ನಡೆದ ಏಳು ಸ್ಪರ್ಧೆಗಳಲ್ಲಿ ಒಟ್ಟು 6026 ಅಂಕ ಗಳಿಸಿದರು. ಹೆಪ್ಟಾಥ್ಲಾನ್‌ನಲ್ಲಿ 100 ಮೀ. ಓಟ, ಹೈಜಂಪ್, ಶಾಟ್‌ಪುಟ್, 200 ಮೀ.ಓಟ, ಲಾಂಗ್‌ಜಂಪ್, ಜಾವೆಲಿನ್ ಎಸೆತ ಹಾಗೂ 800 ಮೀ. ಓಟದ ಸ್ಪರ್ಧೆಗಳಿರುತ್ತವೆ. ಚೀನಾದ ವಾಂಗ್ ಕ್ವಿಂಗ್‌ಲಿಂಗ್(5954)ಬೆಳ್ಳಿ ಪದಕ ಜಯಿಸಿದರೆ, ಜಪಾನ್‌ನ ಯುಕಿ ಯಮಾಸಕಿ(5873 ಅಂಕ)ಕಂಚಿನ ಪದಕ ಗೆದ್ದುಕೊಂಡರು. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಅಥ್ಲೀಟ್ ಪೂರ್ಣಿಮಾ 5837 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು.

ಸ್ವಪ್ನಾ ಪ್ರಶಸ್ತಿ ಹಾದಿಯಲ್ಲಿ ಹೈಜಂಪ್(1003 ಅಂಕ)ಹಾಗೂ ಜಾವೆಲಿನ್ ಎಸೆತ(872 ಅಂಕ)ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರೆ, ಶಾಟ್‌ಪುಟ್(707) ಹಾಗೂ ಲಾಂಗ್‌ಜಂಪ್(865)ಎರಡನೇ ಸ್ಥಾನ ಪಡೆದರು.

100ಮೀ.ಓಟ(981 ಅಂಕ,5ನೇ ಸ್ಥಾನ) ಹಾಗೂ 200 ಮೀ. ಓಟ(790,7ನೇ ಸ್ಥಾನ)ದಲ್ಲಿ ಸಾಧಾರಣ ಪ್ರದರ್ಶನ ನೀಡಿದರು.

 ಹೆಪ್ಟಾಥ್ಲಾನ್‌ನ ಕೊನೆಯ ಸ್ಪರ್ಧೆ 800 ಮೀ. ಓಟದಲ್ಲಿ ಬರ್ಮನ್ ತನ್ನ ಪ್ರತಿಸ್ಪರ್ಧಿ ಚೀನಾದ ವಾಂಗ್ ವಿರುದ್ಧ ಕೇವಲ 64 ಅಂಕಗಳ ಮುನ್ನಡೆಯಲ್ಲಿದ್ದರು. ನಿರ್ಣಾಯಕ 800 ಮೀ. ಓಟದಲ್ಲಿ ಬರ್ಮನ್ 4ನೇ ಸ್ಥಾನ ಪಡೆಯಷ್ಟೇ ಶಕ್ತರಾದರು. ಆದಾಗ್ಯೂ ಚಾಂಪಿಯನ್ ಆಗಿ ಹೊರಹೊಮ್ಮಿದರು.

 ಸ್ವಪ್ನಾ ಬರ್ಮನ್‌ಗಿಂತ ಮೊದಲು ಬಂಗಾಳದ ಸೋಮಾ ಬಿಸ್ವಾಸ್ ಹಾಗೂ ಕರ್ನಾಟಕದ ಜೆಜೆ ಶೋಭಾ ಹಾಗೂ ಪ್ರಮೀಳಾ ಅಯ್ಯಪ್ಪ ಏಶ್ಯನ್ ಗೇಮ್ಸ್‌ನ ಹೆಪ್ಟಾಥ್ಲಾನ್‌ನಲ್ಲಿ ಪದಕ ಜಯಿಸಿದ್ದರು.ಬಿಸ್ವಾಸ್ ಹಾಗೂ ಶೋಭಾ ಬುಸಾನ್(2002) ಹಾಗೂ ದೋಹಾ ಗೇಮ್ಸ್‌ನಲ್ಲಿ(2006)2-3ನೇ ಸ್ಥಾನ ಪಡೆದಿದ್ದರು. ಪ್ರಮೀಳಾ 2010ರ ಗ್ವಾಂಗ್‌ಝೌ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು.

ಬಡತನದಲ್ಲಿ ಅರಳಿದ ಕ್ರೀಡಾಕುಸುಮ ಸ್ವಪ್ನಾ

 ಪಶ್ಚಿಮಬಂಗಾಳದ ಜಲ್‌ಪೈಗುರಿ ನಗರದಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿರುವ ಸ್ವಪ್ನಾಗೆ ಹುಟ್ಟುವಾಗಲೇ ಎರಡೂ ಕಾಲುಗಳಲ್ಲಿ ಆರುಬೆರಳುಗಳಿದ್ದವು. ಅವರ ಕಾಲಿನ ಅಳತೆಗೆ ತಕ್ಕಂತೆ ಶೂ ಸಿಗದ ಕಾರಣ 5 ಬೆರಳಿಗೆ ಹೊಂದುವ ಶೂಗಳನ್ನು ಧರಿಸಿ ಓಟ ಹಾಗೂ ಜಂಪಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಊಹಿಸಲಾಗದಷ್ಟು ನೋವು ಕಾಡುತ್ತಿತ್ತು. ಏಶ್ಯಾಗೇಮ್ಸ್‌ನಲ್ಲಿ ತನ್ನ ಹಳೆಯ ಶೂ ಧರಿಸಿ ಸ್ಪರ್ಧಿಸಿರುವ ಸ್ವಪ್ನಾಗೆ ಸ್ಪರ್ಧೆಯ ಮೊದಲ ದಿನವೇ ಹಲ್ಲುನೋವು ಕಾಣಿಸಿಕೊಂಡಿತು. ಹೀಗಾಗಿ ಮುಖದ ಒಂದು ಭಾಗ ಬ್ಯಾಂಡೇಜ್ ಕಟ್ಟಿಕೊಂಡೇ ಆಡಿದ ಸ್ವಪ್ನಾ ನೋವನ್ನು ನುಂಗಿ ಚಿನ್ನದ ನಗೆ ಬೀರಿದ್ದಾರೆ. 6,000ಕ್ಕೂ ಅಧಿಕ ಅಂಕ ಗಳಿಸಿದ ಐದನೇ ಮಹಿಳಾ ಹೆಪ್ಟಾಥ್ಲೀಟ್ ಎನಿಸಿಕೊಂಡಿದ್ದಾರೆ.

 ಎರಡು ಹೊತ್ತಿನ ಊಟಕ್ಕೆ ಪರದಾಟ ನಡೆಸುತ್ತಿರುವ ತುಂಬು ಕುಟುಂಬದಲ್ಲಿ ಜನಿಸಿರುವ ಸ್ವಪ್ನಾ ಚಿಕ್ಕವರಿರುವಾಗಲೇ ಆಕೆಯ ತಂದೆ ಪಾರ್ಶ್ವವಾಯುಪೀಡಿತರಾಗಿದ್ದರು. ರಿಕ್ಷಾ ತಳ್ಳುಗಾಡಿ ನಡೆಸುತ್ತಿದ್ದ ತಂದೆ ಇದೀಗ ಹಾಸಿಗೆ ಹಿಡಿದಿದ್ದಾರೆ. ತಾಯಿ ಚಹಾ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News