ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಗರು ಗೆದ್ದರೆ ಹಿಂಸಾಚಾರ: ಟ್ರಂಪ್ ಎಚ್ಚರಿಕೆ

Update: 2018-08-30 14:55 GMT

ವಾಶಿಂಗ್ಟನ್, ಆ. 30: ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆಗೆ ಪ್ರಯತ್ನಗಳನ್ನು ನಡೆಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧಾರ್ಮಿಕ ಮುಖಂಡರನ್ನು ಒತ್ತಾಯಿಸಿದ್ದಾರೆ.

ಒಂದು ವೇಳೆ, ಈ ಪ್ರಯತ್ನದಲ್ಲಿ ನಾವು ವಿಫಲರಾದರೆ ವಿರೋಧಿಗಳು ಹಿಂಸಾಚಾರ ನಡೆಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ. ಸೋಮವಾರ ಸಂಜೆ ಶ್ವೇತಭವನದಲ್ಲಿ ಏರ್ಪಡಿಸಿದ ಔತಣಕೂಟದ ವೇಳೆ ಟ್ರಂಪ್ ಈ ಎಚ್ಚರಿಕೆ ನೀಡಿದರು. ಕ್ರೈಸ್ತ ಪಾಸ್ಟರ್‌ಗಳು, ಮಿನಿಸ್ಟರ್‌ಗಳು ಮತ್ತು ಟ್ರಂಪ್ ಆಡಳಿತದ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಔತಣಕೂಟದಲ್ಲಿ ಭಾಗವಹಿಸಿದ್ದರು. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಟ್ರಂಪ್ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ.

‘‘ವಿರೋಧಿ ಡೆಮಾಕ್ರಟಿಕ್ ಪಕ್ಷದವರು ಈ ಚುನಾವಣೆಯಲ್ಲಿ ಗೆದ್ದರೆ, ನಾವು ಮಾಡಿದ ಎಲ್ಲವನ್ನೂ ಅವರು ಬುಡಮೇಲು ಮಾಡುತ್ತಾರೆ. ಹಾಗೂ ಅವರು ತಮ್ಮ ಬುಡಮೇಲು ಕೃತ್ಯಗಳನ್ನು ಅತ್ಯಂತ ವೇಗವಾಗಿ ಮತ್ತು ಹಿಂಸಾತ್ಮಕವಾಗಿ ಮಾಡುತ್ತಾರೆ’’ ಎಂದು ಅವರು ಹೇಳಿದ್ದಾರೆ.

ಔತಣಕೂಟದಲ್ಲಿ ಭಾಗವಹಿಸಿದವರು ಈ ಮಾತುಗಳನ್ನು ಹೇಳಿದ್ದಾರೆ. ಆ ಸಭೆಯಲ್ಲಿ ಟ್ರಂಪ್ ಮಾಡಿದ ಭಾಷಣದ ಧ್ವನಿಮುದ್ರಿಕೆಗಳು ಅವರ ಹೇಳಿಕೆಗಳನ್ನು ದೃಢಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News