‘ವಾಟರ್‌ಗೇಟ್’ ಹಗರಣದ ಪತ್ರಕರ್ತನಿಂದ ಸುಳ್ಳು ಸುದ್ದಿಗಳ ಸರಮಾಲೆ!: ಟ್ರಂಪ್ ಟ್ವೀಟ್

Update: 2018-08-30 14:59 GMT

ವಾಶಿಂಗ್ಟನ್, ಆ. 30: ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವರದಿಗಾರ ಕಾರ್ಲ್ ಬರ್ನ್‌ಸ್ಟೀನ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡಗಾರಿದ್ದಾರೆ. ಅವರು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.

‘‘ಬರ್ನ್‌ಸ್ಟೀನ್ ಗತ ಕಾಲದಲ್ಲಿ ಜೀವಿಸುತ್ತಿದ್ದಾರೆ ಹಾಗೂ ನೈತಿಕ ಅರ್ಧಪತನಗೊಂಡ ವ್ಯಕ್ತಿಯಂತೆ ಯೋಚಿಸುತ್ತಿದ್ದಾರೆ. ಅವರು ಒಂದರ ಬಳಿಕ ಒಂದರಂತೆ ನನ್ನ ಬಗ್ಗೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಅವರನ್ನು ನೋಡಿ ದೇಶಾದ್ಯಂತ ಜನರು ನಗುತ್ತಿದ್ದಾರೆ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅವರು ಸಿಎನ್‌ಎನ್ ವಿರುದ್ಧವೂ ಕಿಡಿಗಾರಿದ್ದಾರೆ. ‘‘ಅವರು ಸುಳ್ಳು ಹೇಳಿರುವುದು ಗೊತ್ತಾದ ಬಳಿಕ, ಸಂಸ್ಥೆಯು ಒಳಗಿನಿಂದ ಕುಸಿಯುತ್ತಿದೆ. ಆದರೆ, ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸುತ್ತಿದ್ದಾರೆ’’ ಎಂಬುದಾಗಿ ಅವರ ಟ್ವೀಟ್ ಹೇಳುತ್ತದೆ.

ಏನಿದು ವಾಟರ್‌ಗೇಟ್ ಹಗರಣ?

ವಾಶಿಂಗ್ಟನ್ ಡಿಸಿಯಲ್ಲಿರುವ ‘ವಾಟರ್‌ಗೇಟ್’ ಕಟ್ಟಡದಲ್ಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿ ಕಚೇರಿಗೆ 1972ರಲ್ಲಿ ಐವರು ಕಳ್ಳರು ನುಗ್ಗಿ ಮಹತ್ವದ ದಾಖಲೆಗಳನ್ನು ಕಳ್ಳತನ ಮಾಡಿದರು.

 ಇದು ರಾಜಕೀಯ ಸೂಕ್ಷ್ಮ ವಿಷಯವಾದುದರಿಂದ, ಈ ಬಗ್ಗೆ ತನಿಖೆ ನಡೆಸಲು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯು ಬರ್ನ್‌ಸ್ಟೀನ್ ಮತ್ತು ಬಾಬ್ ವುಡ್‌ವಾರ್ಡ್‌ರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿತು.

ಅವರ ಪ್ರಯತ್ನದ ಫಲವಾಗಿ ಕಳ್ಳರು ಪತ್ತೆಯಾದರು. ನಂತರ ನಡೆದ ಜಂಟಿ ಕಾಂಗ್ರೆಸ್ ತನಿಖೆಯಲ್ಲಿ, ಈ ಕಳ್ಳತನದ ಹಿಂದೆ ಆಗಿನ ಅಧ್ಯಕ್ಷ ನಿಕ್ಸನ್ ಮತ್ತು ಅವರ ಸರಕಾರ ಇದ್ದುದು ಪತ್ತೆಯಾಯಿತು.

ಈ ಹಿನ್ನೆಲೆಯಲ್ಲಿ, 1974ರಲ್ಲಿ ನಿಕ್ಸನ್ ರಾಜೀನಾಮೆ ನೀಡಬೇಕಾಯಿತು. ರಿಪಬ್ಲಿಕನ್ ಪಕ್ಷದ ನಿಕ್ಸನ್ ತನ್ನ ಎದುರಾಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇಂಥ ತಂತ್ರಕ್ಕೆ ಮೊರೆಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News