ಪ್ರಾದೇಶಿಕ ಸಂಪರ್ಕ ಹೆಚ್ಚಿಸಲು ಭಾರತ ಬದ್ಧ: ‘ಬಿಮ್‌ಸ್ಟೆಕ್’ ಶೃಂಗಸಮ್ಮೇಳನದಲ್ಲಿ ಮೋದಿ ಘೋಷಣೆ

Update: 2018-08-30 17:02 GMT

ಕಠ್ಮಂಡು, ಆ. 30: ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಹಾಗೂ ಭಯೋತ್ಪಾದನೆ ಮತ್ತು ಮಾದಕ ದ್ರವ್ಯ ಸಾಗಾಟದ ಪಿಡುಗಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ‘ಬಿಮ್‌ಸ್ಟೆಕ್’ ಸದಸ್ಯ ದೇಶಗಳೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಕಠ್ಮಂಡುವಿನಲ್ಲಿ ನಡೆಯುತ್ತಿರುವ ನಾಲ್ಕನೇ ಬಿಮ್‌ಸ್ಟೆಕ್ ಶೃಂಗಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಪ್ರಯತ್ನಗಳಲ್ಲಿ ಸದಸ್ಯ ದೇಶಗಳ ನಡುವೆ ಸಹಕಾರ ಮತ್ತು ಸಮನ್ವಯತೆಗಾಗಿ ಕರೆ ನೀಡಿದರು.

‘‘ಈ ವಲಯದಲ್ಲಿ ಭಯೋತ್ಪಾದನೆ ಮತ್ತು ಗಡಿಯಾಚೆಯಿಂದ ನಡೆಯುವ ಅಪರಾಧಗಳು ಸಂಭವಿಸದ ಯಾವುದೇ ದೇಶವಿಲ್ಲ. ಮಾದಕ ದ್ರವ್ಯ ಕಳ್ಳಸಾಗಣೆಯು ಭಯೋತ್ಪಾದನೆಯೊಂದಿಗೆ ನಂಟು ಹೊಂದಿದೆ’’ ಎಂದರು.

 ‘ಬಿಮ್‌ಸ್ಟೆಕ್’ (ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಕೋಪರೇಶನ್) ಎಂದರೆ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳಗಳನ್ನೊಳಗೊಂಡ ಪ್ರಾದೇಶಿಕ ಗುಂಪಾಗಿದೆ.

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಶೃಂಗ ಸಮ್ಮೇಳನವನ್ನು ಉದ್ಘಾಟಿಸಿದರು.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹಾಗೂ ಥಾಯ್ಲೆಂಡ್, ಭೂತಾನ್ ಮತ್ತು ಮ್ಯಾನ್ಮಾರ್‌ಗಳ ನಾಯಕರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News