ವಿದೇಶಿ ನೆರವು ಸ್ವೀಕರಿಸಲು ಅನುಮತಿ ಕೋರಿ ಸಲ್ಲಿಸಿದ ಮನವಿ ಹೈಕೋರ್ಟ್‌ನಿಂದ ತಿರಸ್ಕೃತ

Update: 2018-08-30 18:02 GMT

ಕೊಚ್ಚಿ, ಆ. 30: ನೆರೆಯಿಂದ ಜರ್ಝರಿತ ಕೇರಳದ ಪರಿಹಾರ ಕಾರ್ಯಾಚರಣೆಗೆ ವಿದೇಶಿ ನೆರವು ಸ್ವೀಕರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿ ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಕೇಂದ್ರ ಸರಕಾರದ ನೀತಿ ವಿಷಯಗಳ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದೆ.

ಅರುಣ್ ಜೋಸೆಫ್ ಅವರು ಸಲ್ಲಿಸಿದ ಮನವಿ ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಎ.ಕೆ. ಜಯಶಂಕರನ್ ನಂಬಿಯಾರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ಇದು ಸರಕಾರದ ವಿದೇಶಿ ನೀತಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ವಿದೇಶಿ ನರವು ಸ್ವೀಕರಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನೆರೆಯ ಹಿನ್ನೆಲೆಯಲ್ಲಿ ವಿದೇಶಗಳು ನೆರವು ನೀಡಲು ಮಂದೆ ಬಂದ ಯಾವುದೇ ಸ್ಪಷ್ಟ ದಾಖಲೆಗಳು ದೂರುದಾರರಲ್ಲಿ ಇಲ್ಲ ಎಂದು ಕೂಡ ನ್ಯಾಯಪೀಠ ಹೇಳಿದೆ.

ನೆರಪೀಡಿತ ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ವಿದೇಶಿ ನೆರವು ಸ್ವೀಕರಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಅರುಣ್ ಜೋಸೆಫ್ ಅರ್ಜಿ ಸಲ್ಲಿಸಿದ್ದರು. ಈಗ ಅಸ್ತಿತ್ವದಲ್ಲಿ ಇರುವ ನೀತಿಗೆ ಸರಿಯಾಗಿ ನೆರೆ ಪೀಡಿತ ಕೇರಳ ವಿದೇಶಿ ಸರಕಾರದಿಂದ ಯಾವುದೇ ನೆರವು ಸ್ವೀಕರಿಸುವಂತಿಲ್ಲ ಎಂದು ಕಳೆದ ವಾರ ಕೇಂದ್ರ ಸರಕಾರ ಸ್ಪಷ್ಟವಾಗಿ ಹೇಳಿತ್ತು. ಸ್ವದೇಶಿ ಪ್ರಯತ್ನದ ಮೂಲಕ ಕೇರಳದಲ್ಲಿ ಪರಿಹಾರ ಹಾಗೂ ಪುನರ್ವಸತಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸರಕಾರ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News