ಕೃಷ್ಣಾಪುರ: ಉಳಿತಾಯ ಡಬ್ಬಿಯ ಹಣವನ್ನು ಪ್ರವಾಹ ನಿಧಿಗೆ ನೀಡಿದ ಬಾಲಕ

Update: 2018-08-31 06:00 GMT

ಮಂಗಳೂರು, ಆ. 31: ಕೇರಳ ಹಾಗೂ ಕೊಡಗು ಪ್ರವಾಹದ ಸಂತ್ರಸ್ತರಿಗೆ ಮಂಗಳೂರಿನ 2ನೇ ತರಗತಿಯ ಪುಟ್ಟ ಬಾಲಕನೊಬ್ಬ ವಿಶಿಷ್ಟ ರೀತಿಯಲ್ಲಿ  ನೆರವು ನೀಡಿದ್ದಾನೆ.

ಸುರತ್ಕಲ್ ಕಾಟಿಪಳ್ಳ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಹಿಶಾಮ್ ಎಂಬಾತನೇ ನೆರವು ನೀಡಿದ ಬಾಲಕ.

ಕೃಷ್ಣಾಪುರ ನಿವಾಸಿ ಬಿ.ಕೆ. ಹಿದಾಯತ್ ಕಡೂರು ಅವರ ಪುತ್ರನಾಗಿರುವ ಈತನಿಗೆ ತಂದೆ, ಕೆಲವು ತಿಂಗಳ ಹಿಂದೆ ಹಣ ಉಳಿತಾಯದ ಬಗ್ಗೆ ತಿಳಿಸಿ, ಪ್ಲಾಸ್ಟಿಕ್ ಡಬ್ಬಿಯೊಂದನ್ನು ನೀಡಿದ್ದರು. ಹಿಶಾಮ್ ಈ ಡಬ್ಬಿಯಲ್ಲಿ ತನಗೆ ಸಿಕ್ಕಿದ ಚಿಲ್ಲರೆ ಹಣಗಳನ್ನು ಹಾಕಿ, ಉಳಿತಾಯ ಮಾಡುತ್ತಾ ಬಂದಿದ್ದನು. ಈ ಡಬ್ಬಿ ತುಂಬುತ್ತಾ ಬಂದಿತ್ತು.

ಈ ಮಧ್ಯೆ ಇತ್ತೀಚೆಗೆ ಕೇರಳ ಮತ್ತು ಕೊಡಗಿನಲ್ಲಿ ಉಂಟಾದ ಭೂಕುಸಿತ ಮತ್ತು ಪ್ರವಾಹವನ್ನು ಟಿವಿಯಲ್ಲಿ ವೀಕ್ಷಿಸಿದ್ದ ಹಿಶಾಮ್, ಸಂತ್ರಸ್ತರ ಸಂಕಷ್ಟವನ್ನೂ ವೀಕ್ಷಿಸಿದ್ದನು. ಇದಕ್ಕಾಗಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಬಂದು ನೆರವು ನೀಡಿದ್ದನ್ನೂ ಕಂಡ ಬಾಲಕ ಹಿಶಾಮ್‍ ಮನೆಯ ಕಪಾಟಿನಲ್ಲಿ ಭದ್ರವಾಗಿಟ್ಟಿದ್ದ ತನ್ನ ಉಳಿತಾಯ ಡಬ್ಬಿಯನ್ನು ತಂದೆಯ ಬಳಿ ನೀಡಿ, ಇದನ್ನು ಪ್ರವಾಹ ಸಂತ್ರಸ್ತರಿಗೆ ನೀಡುವಂತೆ ಕೋರಿದ್ದಾನೆ. ಮಗನ ಈ ಹೃದಯವಂತಿಕೆಯಿಂದ ಸಂತೋಷಗೊಂಡ ತಂದೆ ಬಿ.ಕೆ. ಹಿದಾಯತ್, ಮರುದಿವಸವೇ ಮಂಗಳೂರಿಗೆ ಮಗನೊಂದಿಗೆ ಬಂದು ವಾರ್ತಾ ಇಲಾಖೆ ಕಚೇರಿಯಲ್ಲಿ ಈ ಉಳಿತಾಯದ ಡಬ್ಬಿಯನ್ನು ವಾರ್ತಾ ಇಲಾಖೆ ಅಧಿಕಾರಿ ಬಿ.ಎ.ಖಾದರ್ ಶಾ ಅವರಿಗೆ ನೀಡಿದ್ದಾರೆ. ಈ ಮೊತ್ತವನ್ನು ಮುಖ್ಯಮಂತ್ರಿಯವರ ವಿಪತ್ತು ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.

ಈ ಪುಟ್ಟ ಬಾಲಕನ ಹೃದಯವಂತಿಕೆ ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News