ಕುಟುಂಬದ ಜೊತೆ ಮತ ಚಲಾಯಿಸಿದ ಶಾಸಕ ರಘುಪತಿ ಭಟ್

Update: 2018-08-31 11:23 GMT

ಉಡುಪಿ, ಆ.31: ಉಡುಪಿ ನಗರ ಸಭೆಯ ಕರಂಬಳ್ಳಿ ವಾರ್ಡ್ ಸಂಖ್ಯೆ 12ರ ನಿಟ್ಟೂರು ಶಾಲೆಯ ಮತಗಟ್ಟೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಇವರೊಂದಿಗೆ ತಾಯಿ ಸರಸ್ವತಿ ಬಡಿತ್ತಾಯ, ಪತ್ನಿ ಶಿಲ್ಪಾ ಮತದಾನ ಮಾಡಿದರು.

ಬಳಿಕ ಮಾತನಾಡಿದ ಶಾಸಕ ರಘುಪತಿ ಭಟ್, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ನೆಲೆಕೊಟ್ಟ ಉಡುಪಿ ನಗರಸಭೆಯ ಈ ಬಾರಿಯ ಗೆಲುವು ನಮಗೆ ಬಹಳ ಮುಖ್ಯ. ರಾಷ್ಟ್ರದಲ್ಲೇ ಮೊದಲ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟ ಉಡುಪಿ ನಗರಸಭೆಯನ್ನು ವಾಜಪೇಯಿ, ಅಡ್ವಾಣಿ ಹೆಮ್ಮೆಯಿಂದ ಗುರುತಿಸುತ್ತಾರೆ. ಪ್ರಧಾನಿ ಮೋದಿಯೂ ಉಡುಪಿ ನಗರಸಭೆಯ ಬಿಜೆಪಿ ಆಡಳಿತದ ಬಗ್ಗೆ ಮಾತನಾಡುತ್ತಾರೆ ಎಂದರು.

ನಗರಸಭೆ ಚುನಾವಣೆಗೆ ಎಲ್ಲ ಸಂಸ್ಥೆಗಳಿಗೆ ಕಡ್ಡಾಯ ರಜೆ ನೀಡಬೇಕಾಗಿತ್ತು. ಮಣಿಪಾಲದ ಖಾಸಗಿ ಸಂಸ್ಥೆಗಳಿಗೂ ರಜೆ ನೀಡಿಲ್ಲ. ರಜೆ ನೀಡುತ್ತಿದ್ದರೆ ಮತದಾರರಿಗೆ ಸಮಸ್ಯೆ ಆಗುತ್ತಿರಲಿಲ್ಲ. ಉಡುಪಿ ನಗರಸಭೆಯ ಎರಡು ಮತ ಗಟ್ಟೆಯಲ್ಲಿ ಮತಯಂತ್ರ ದೋಷ ಕಾಣಿಸಿಕೊಂಡಿದೆ. ಇದರಿಂದ ಅನೇಕರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮತಯಂತ್ರದ ಅವ್ಯವಸ್ಥೆ ಬಗ್ಗೆ ಬೇಸರ ಆಗಿದೆ ಎಂದು ಅವರು ತಿಳಿಸಿದರು.

ಮತ ಹಾಕಲು ಹಠ ಹಿಡಿದ ಶಾಸಕರ ಪುತ್ರ !

ಶಾಸಕ ಕೆ. ರಘುಪತಿ ಭಟ್ ಮತದಾನದ ಸಂದರ್ಭ ತನ್ನ ಜೊತೆ ಕರೆದು ಕೊಂಡು ಬಂದಿದ್ದ ಪುತ್ರ ಮೂರರ ಹರೆಯದ ರಿಹಾಂಶ್ ಮತದಾನ ಮಾಡುವಂತೆ ಹಠ ಹಿಡಿದು ಅತ್ತ ಘಟನೆ ನಿಟ್ಟೂರು ಮತಗಟ್ಟೆಯಲ್ಲಿ ನಡೆಯಿತು.

ತಂದೆ ರಘುಪತಿ ಭಟ್, ತಾಯಿ, ಅಜ್ಜಿ ಜೊತೆ ಮತಗಟ್ಟೆಗೆ ಬಂದಿದ್ದ ರಿಹಾಂಶ್ ತಾನು ಕೂಡ ಮತ ಚಲಾಯಿಸುವುದಾಗಿ ಹಠ ಹಿಡಿದ. ಎಷ್ಟೆ ಸಮಾಧಾನ ಮಾಡಿದರೂ ಪಟ್ಟು ಬಿಡದೆ ಅಳಲಾರಂಭಿಸಿದ. ಬಳಿಕ ಶಾಸಕರ ಕಾರು ಚಾಲಕ ರಿಹಾಂಶ್‌ನನ್ನು ಅಧಿಕಾರಿಗಳ ಬಳಿಗೆ ಕರೆದೊಯ್ದು, ಆತನ ಎಡಗೈ ತೋರು ಬೆರಳಿಗೆ ಶಾಹಿಮುದ್ರೆ ಹಾಕಿದರು. ನಂತರ ರಿಹಾಂಶ್ ಅಳು ನಿಲ್ಲಿಸಿ, ಬೆರಳಿನಲ್ಲಿ ವಿಕ್ಟರಿ ಸಿಂಬಲ್ ತೋರಿಸಿದನು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಚುನಾವಣೆಯ ವಾತಾವರಣ ಇತ್ತು. ಹಾಗಾಗಿ ಆತ ಮತ ಹಾಕುತ್ತೇನೆ ಎಂದು ಹಠ ಮಾಡಿದ್ದಾನೆ. ಆತ ಮೋದಿ ಅಭಿಮಾನಿ ಎಂದು ಹೇಳಿ ನಕ್ಕಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News