ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ವಾಗ್ಮೋರೆ ಆರೆಸ್ಸೆಸ್ ಕಾರ್ಯಕರ್ತ: ಪ್ರಮೋದ್ ಮುತಾಲಿಕ್

Update: 2018-08-31 13:37 GMT

ಮಂಗಳೂರು, ಆ.31: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ವಾಗ್ಮೋರೆ ಶ್ರೀರಾಮಸೇನೆ ಕಾರ್ಯಕರ್ತನಲ್ಲ. ಬದಲಾಗಿ ಆತ ಆರೆಸ್ಸೆಸ್ ಕಾರ್ಯಕರ್ತ ಎಂದು  ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ನಗರದ ಬಲ್ಮಠದ ಆರ್ಯ ಸಮಾಜ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಧ್ವಜ ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಗ್ಮೋರೆಯನ್ನು ಸಿಲುಕಿಸಲಾಯಿತು. ಈ ಸಂದರ್ಭ ವಾಗ್ಮೋರೆ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ. ಆತನನ್ನು ಸೇರಿದಂತೆ ಆರು ಮಂದಿ ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧನದ ಬಳಿಕ ಆರೆಸ್ಸೆಸ್ ಆತನನ್ನು ಕೈಬಿಟ್ಟಿತ್ತು. ಆತನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬುದು ತಿಳಿದ ಬಳಿಕ ವಾಗ್ಮೋರೆಗೆ ತಾನು ವಕೀಲರ ವ್ಯವಸ್ಥೆ ಮಾಡಿಸಿದೆ. ಆತನು ಕೋರ್ಟ್‌ನಿಂದ ಹೊರಬಂದಾಗ ಆತನೊಂದಿಗೆ ತೆಗೆದಿರುವ ಫೋಟೊ ಅದಾಗಿದೆ ಎಂದು ಮುತಾಲಿಕ್ ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಲು ಆಗ್ರಹ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಇದೀಗ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಪುನಃ ನರಸಿಂಹ ಮಠಕ್ಕೆ ಹಸ್ತಾಂತರಿಸಬೇಕು ಎಂದು ಮುತಾಲಿಕ್ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪಸಂಸ್ಕಾರ ಶಾಸ್ತ್ರೋಕ್ತವಲ್ಲ. ಸುಬ್ರಹ್ಮಣ್ಯ ಮಠದಲ್ಲಿ ನಡೆಯುವ ಸೇವೆಗಳು ಮಾತ್ರ ಶಾಸ್ತ್ರೋಕ್ತವಾಗಿವೆ. ಪ್ರಾಯಶ್ಚಿವಾಗಿ ಮಾಡುವ ಸರ್ಪಸಂಸ್ಕಾರ, ಆಶ್ಲೇಷಾ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಮಾಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡುವ ಸಾಮೂಹಿಕ ಪೂಜೆ ಶಾಸ್ತ್ರೋಕ್ತವಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News